ಚೀನಾದ ಮತ್ತೊಂದು ಕುತಂತ್ರ ಬಯಲು..! ಮಾಧ್ಯಮಗಳ ಮೇಲೂ ಇದೆ ‘ಡ್ರ್ಯಾಗನ್’ ಕಳ್ಳಗಣ್ಣು
ಚೀನಾಗೆ ಬೇಕಿರುವುದು ಏಷ್ಯಾದ ಸಾರ್ವಭೌಮತ್ವ. ಅದಕ್ಕೆ ಪ್ರಮುಖವಾಗಿ ಅಡ್ಡಿಯಾಗಿರುವುದು ಅಭಿವೃದ್ಧಿಶೀಲ ರಾಷ್ಟ್ರವಾಗಿ ಮುನ್ನುಗ್ಗುತ್ತಿರುವ ನಮ್ಮ ಭಾರತ. ಇದನ್ನು ಸಹಿಸಲಾಗದ ಚೀನಾ ಸರ್ಕಾರವು, ತನ್ನ ಹ್ಯಾಕರ್ಸ್‌ಗಳ ಮೂಲಕ ಸರ್ಕಾರಿ ಅಧಿಕಾರಿಗಳು, ಮಾಧ್ಯಮ ಸಂಸ್ಥೆಗಳು, ಪೊಲೀಸರು ಮತ್ತು ರಕ್ಷ ಣಾ ಇಲಾಖೆಯ ಉನ್ನತ ಅಧಿಕಾರಿಗಳ ಅಧಿಕೃತ ಮಾಹಿತಿಗಳನ್ನು ಕಳವು ಮಾಡಲು ಕುಮ್ಮಕ್ಕು ನೀಡುತ್ತಿದೆ. ಈ ಬಗ್ಗೆ ಅಮೆರಿಕದ ಖಾಸಗಿ ಸೈಬರ್ ಸೆಕ್ಯೂರಿಟಿ ಕಂಪನಿ ‘ ಇನ್‌ಸಿಕ್ಟ್ ‘ ಎಚ್ಚರಿಸಿದೆ.
‘ಟ್ಯಾಗ್-28’ ಎಂದು ಹೆಸರಿಡಲಾಗಿರುವ ಹ್ಯಾಕರ್ಸ್ ಗುಂಪನ್ನು ಚೀನಾ ಸರ್ಕಾರವು ರಚಿಸಿದೆ. ಅತ್ಯಾಧುನಿಕ ತಂತ್ರಜ್ಞಾನ ಸಾಧನಗಳನ್ನು ಈ ತಂಡಕ್ಕೆ ಕೊಡಿಸಿ, ‘ವಿಂಟಿ’ ಎಂಬ ಮಾಲ್‌ವೇರ್ (ಕಳ್ಳಗಣ್ಣು ಸಾಧನ) ಮೂಲಕ ಭಾರತದ ಪ್ರತಿ ವಲಯದ ಹೆಜ್ಜೆಗಳನ್ನು ಗಮನಿಸುತ್ತಿರಲು ಆದೇಶಿಸಿದೆಯಂತೆ.
ಕಂಪನಿಯ ಅಧ್ಯಯನ ಪ್ರಕಾರ 2020ರ ಹೋಲಿಕೆಯಲ್ಲಿ 2021ರಲ್ಲಿ ಚೀನಾದ ಸೈಬರ್ ಸೆಕ್ಯೂರಿಟಿ ಕಾರ್ಯಾಚರಣೆಗಳ ಮೂಲಕ ಭಾರತ ಸರ್ಕಾರದ ವೆಬ್ ಸೈಟ್, ಗೌಪ್ಯ ದಾಖಲೆಗಳ ಸಾಫ್ಟ್‌ವೇರ್ ಸಂಗ್ರಹಗಳ ಮೇಲೆ 261% ನಷ್ಟು ಹೆಚ್ಚು ಬಾರಿ ಹ್ಯಾಕರ್ಸ್ ದಾಳಿ ನಡೆಸಿದ್ದಾರೆ. ಮುಂಬೈ ಮೂಲದ ದಿನಪತ್ರಿಕೆಯೊಂದರ ಖಾಸಗಿ ಮಾಹಿತಿ ಜಾಲದಿಂದ ಫೆಬ್ರುವರಿ ಮತ್ತು ಆಗಸ್ಟ್‌ನಲ್ಲಿ’500 ಎಂಬಿ’ ಗಳಷ್ಟು ಮಾಹಿತಿಯನ್ನು ಚೀನಾ ಹ್ಯಾಕರ್ಸ್ ಕದ್ದಿರುವುದು ಭಾರತದ ಸೈಬರ್‌ಸೆಕ್ಯೂರಿಟಿ ತಜ್ಞರ ಗಮನಕ್ಕೂ ಬಂದಿದೆಯಂತೆ.
ಮಧ್ಯಪ್ರದೇಶದ ಪೊಲೀಸ್ ಇಲಾಖೆಯ ಇ-ದಾಖಲೆಗಳ ಸಂಗ್ರಹದಿಂದಲೂ ಚೀನಾ ಮಾಹಿತಿ ಕದ್ದಿದೆಯಂತೆ. 2020ರ ಜೂನ್‌ನಲ್ಲಿ ಭಾರತ-ಚೀನಾ ಗಡಿ ಬಿಕ್ಕಟ್ಟು ಉಲ್ಬಣಗೊಂಡಾಗ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.