ಒಂದು ಕಾಲೇಜಿನಲ್ಲಿ(College) ವಿದ್ಯಾಭ್ಯಾಸಕ್ಕಾಗಿ ಸೇರಿಕೊಳ್ಳಬೇಕಾದರೆ ಸಾಮಾನ್ಯವಾಗಿ ನಾವೆಲ್ಲರೂ ಶುಲ್ಕ ನೀಡಬೇಕಾಗುತ್ತದೆ. ಆದರೆ ಬಿಹಾರದ ಬಕ್ಸಾರ್(Bihar Buxar) ಜಿಲ್ಲೆಯಲ್ಲಿರುವ ಖಾಸಗಿ ಎಂಜಿನಿಯರಿಂಗ್ ಕಾಲೇಜು(Engineering) ತನ್ನ ವಿದ್ಯಾರ್ಥಿಗಳಿಗೆ ನೀಡಿದ ವಿಶಿಷ್ಟ ಶುಲ್ಕ ಮಾದರಿಗೆ ಜನಪ್ರಿಯವಾಗಿತ್ತು. ಆದರೆ ಈಗ ತೆಗೆದುಕೊಂಡಿರುವ ಬ್ಯಾಂಕ್ ಸಾಲವನ್ನು(Loan) ಮರು ಪಾವತಿಸಲು ಆಗದ ಕಾರಣ ಕಾಲೇಜಿಗೆ ಬೀಗ ಹಾಕಿದ್ದಾರೆ.ನಾಲ್ಕು ವರ್ಷಗಳ ಎಂಜಿನಿಯರಿಂಗ್ ಕೋರ್ಸ್ ಅನ್ನು ನೀವು ಓದಲು ಕಾಲೇಜಿಗೆ ಶುಲ್ಕದ ರೂಪದಲ್ಲಿ ಐದು ಹಸುಗಳನ್ನು ನೀಡಿದರೆ ಸಾಕಾಗಿತ್ತು.
ಈ ಕಾಲೇಜಿನ ವಿಶೇಷತೆ ಏನು?
2010ರಲ್ಲಿ ಬಕ್ಸಾರ್ ನ ಅರಿಯಾನ್ ಗ್ರಾಮದಲ್ಲಿ ಸ್ಥಾಪಿಸಲಾದ ವಿದ್ಯಾದಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (ವಿಐಟಿಎಂ) ಅನ್ನು ಮಾಜಿ ಡಿಆರ್‌ಡಿಒ ವಿಜ್ಞಾನಿಗಳಾದ ಎಸ್.ಕೆ.ಸಿಂಗ್ ಮತ್ತು ಅರುಣ್ ಕುಮಾರ್ ವರ್ಮಾ ಸೇರಿದಂತೆ ನಿವೃತ್ತ ಮತ್ತು ಸೇವೆ ಸಲ್ಲಿಸುತ್ತಿರುವ ವೃತ್ತಿಪರರ ಗುಂಪೊಂದು ಸೇರಿಕೊಂಡು ಶುರು ಮಾಡಿದ್ದರು.
ಕಾಲೇಜು ಪ್ರಾರಂಭವಾದಾಗ, ಪಾಟ್ನಾದ ಆರ್ಯಭಟ್ಟ ಜ್ಞಾನ ವಿಶ್ವವಿದ್ಯಾಲಯಕ್ಕೆ ಸಂಯೋಜಿತವಾಗಿರುವ ಈ ಸಂಸ್ಥೆಯು ತನ್ನ ಶುಲ್ಕವಾಗಿ ಹಸುಗಳನ್ನು ಆಯ್ಕೆಮಾಡಿತ್ತು. ಹೀಗಾಗಿ ಅರಿಯಾನ್ ಮತ್ತು ಹತ್ತಿರದ ಹಳ್ಳಿಗಳಲ್ಲಿ ಕೋಲಾಹಲವನ್ನು ಸೃಷ್ಟಿಸಿತ್ತು. ಈ ಕೋರ್ಸ್ ಓದಲು ಪ್ರತಿ ವರ್ಷಕ್ಕೆ 72,000 ರೂಪಾಯಿಯನ್ನು ಯಾರಿಗೆ ನೀಡಲು ಸಾಧ್ಯವಾಗುವುದಿಲ್ಲವೋ ಅವರು ಮೊದಲ ವರ್ಷದಲ್ಲಿ ಎರಡು ಹಸುಗಳು ಮತ್ತು ಕೋರ್ಸ್ ನ ನಂತರದ ಮೂರು ವರ್ಷಗಳಲ್ಲಿ ತಲಾ ಒಂದು ಹಸು ನೀಡಬೇಕಾಗಿ ಹೇಳಿದ್ದರು.