ಸುದ್ದಿ

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ತೀರ್ಪು ಕಾಯ್ದಿರಿಸಿದ ‘ಸುಪ್ರೀಂ’

ನವದೆಹಲಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ವಿರುದ್ಧದ ಆರೋಪ ರದ್ದುಪಡಿಸಿದ್ದ ಹೈಕೋರ್ಟ್‌ನ ಆದೇಶ ಪ್ರಶ್ಮಿಸಲಾದ ಮೇಲ್ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್, ತೀರ್ಪನ್ನು ಕಾಯ್ದಿರಿಸಿತು.

ಆರೋಪಿ ಮೋಹನ್‌ ನಾಯಕ್‌ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೊಕಾ) ಅಡಿ ದಾಖಲಿಸಲಾದ ಆರೋಪ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಗೌರಿ ಅವರ ಸೋದರಿ ಕವಿತಾ ಲಂಕೇಶ್‌ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್‌ ನೇತೃತ್ವದ ತ್ರಿಸದಸ್ಯ ಪೀಠ ಪೂರ್ಣಗೊಳಿಸಿತು.

ಅರ್ಜಿದಾರರ ಪರ ವಕೀಲ ಹುಝೇಫಾ ಅಹ್ಮದಿ ಹಾಗೂ ಆರೋಪಿ ಪರ ವಕೀಲ ಬಸವಪ್ರಭು ಪಾಟೀಲ ಅವರ ವಾದವನ್ನು ಪೀಠ ಆಲಿಸಿತು.

‘ಆರೋಪಿಯು ಪ್ರಸ್ತುತ ಪ್ರಕರಣಕ್ಕಿಂತ ಮೊದಲು ನಡೆದಿರುವ ಅಪರಾಧ ಪ್ರಕರಣಗಳ ಭಾಗವಾಗಿರಲಿಲ್ಲ’ ಎಂಬ ವಾದ ಅಪ್ರಸ್ತುತ. ಅಲ್ಲದೆ, ಘಟನೆ ನಡೆದು 4 ವರ್ಷ ಕಳೆದಿದ್ದರೂ ಪ್ರಕರಣ ಕುರಿತ ಆರೋಪಗಳನ್ನು ಅಂತಿಮಗೊಳಿಸಲಾಗಿಲ್ಲ ಎಂದು ಅಹ್ಮದಿ ಪ್ರತಿಪಾದಿಸಿದರು.

ಅಪರಾಧಕ್ಕೆ ಕುಮ್ಮಕ್ಕು ನೀಡಿದವರು ಮತ್ತು ನೇರವಾಗಿ ಭಾಗಿಯಾದವರ ನಡುವೆ ಕೊಕಾ ಕಾಯ್ದೆ ಅಡಿ ವ್ಯತ್ಯಾಸ ಗುರುತಿಸಲಾಗಿದೆ. ಪ್ರಕರಣಕ್ಕೆ ಕುಮ್ಮಕ್ಕು ನೀಡಿದವರನ್ನು ಅಪರಾಧದ ಗುಂಪಿನ ಸದಸ್ಯನಿಗೆ ಸಮ ಎಂದು ಪರಿಗಣಿಸಬಾರದು ಎಂದು ಆರೋಪಿ ಪರ ವಕೀಲ ಪಾಟೀಲ ಹೇಳಿದರು.

‘ಒಬ್ಬ ವ್ಯಕ್ತಿಯನ್ನು ಸಂಘಟಿತ ಅಪರಾಧ ಗುಂಪಿನ ಸದಸ್ಯ ಎಂದು ಗುರುತಿಸುವುದು ಸರಿಯೇ?’ ಎಂದು ಪ್ರಶ್ನಿಸಿದ ಅವರು, ಆರೋಪಿಯು ಅಪರಾಧದ ಗುಂಪು ನಡೆಸಿರುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಹ್ಮದಿ, ಆರೋಪಿಯು ಇತರ ಆರೋಪಿಗಳಿಗೆ ಆಶ್ರಯ ನೀಡಿದ್ದರಿಂದ, ಸಂಘಟಿತ ಅಪರಾಧದ ಭಾಗ ಎಂದೇ ಪರಿಗಣಿಸಬಹುದು ಎಂದರು.

2017ರ ಸೆಪ್ಟೆಂಬರ್ 5ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ತಮ್ಮ ನಿವಾಸದೆದುರು ಗೌರಿ ಲಂಕೇಶ್‌ ಹತ್ಯೆಗೊಳಗಾಗಿದ್ದರು. ಆರೋಪಿ ನಾಯಕ್‌ ವಿರುದ್ಧ ಪೊಲೀಸರು ಕೊಕಾ ಅಡಿ ಸಲ್ಲಿಸಿದ್ದ ಆರೋಪಗಳನ್ನು ರಾಜ್ಯ ಹೈಕೋರ್ಟ್‌ ಕಳೆದ ಏಪ್ರಿಲ್‌ 22ರಂದು ರದ್ದುಗೊಳಿಸಿ ಆದೇಶಿಸಿತ್ತು.

Related Articles

Leave a Reply

Your email address will not be published. Required fields are marked *

Back to top button