
ಹಾಸನ : ಸತ್ಯವನ್ನೇ ನುಡಿಯಿರಿ, ಸತ್ಯದ ದಾರಿಯಲ್ಲಿ ನಡೆಯಿರಿ ಎಂಬುದು ಗೌತಮ ಬುದ್ದರ ಬೋಧನೆಯಾಗಿದ್ದು, ಗೌತಮ ಬುದ್ಧರ ಬೋಧನೆಗಳು ಪ್ರತಿ ಯುಗದಲ್ಲೂ ಮುಂದೆ ಸಾಗುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಕೆ.ಟಿ ಶಾಂತಲಾ ಅವರು ತಿಳಿಸಿದ್ದಾರೆ.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿಂದು ಹಾಸನಾಂಬ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸತ್ಯ ಜಯಿಸಿಕೊಳ್ಳುತ್ತದೆ ಎಂಬುದಕ್ಕೆ ಬುದ್ಧನ ಬೋಧನೆಗಳೆ ಸಾಕ್ಷಿಗಳು, ಬುದ್ಧ, ಗಾಂಧಿ, ಶಂಕರಾಚಾರ್ಯರು ಹೀಗೆ ಅನೇಕ ಮಹನೀಯರು ಹೇಳಿರುವಂತಹದ್ದು ಕೂಡ ಸತ್ಯವನ್ನು ನುಡಿಯಿರಿ ಎಂಬುದಾಗಿದೆ ಎಂದರು.
ಜಿಲ್ಲೆಯ ಹೊಯ್ಸಳರು ಕಟ್ಟಿರುವಂತಹ ದೇವಾಲಯಗಳು ಇಂದಿಗೂ ಅವಿಸ್ಮರಣೀಯವಾಗಿವೆ ಹಾಗಾಗಿ ನೀವೆಲ್ಲರೂ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಪ್ರಾಮಾಣಿಕತೆಯಿಂದ ಸತ್ಯದಿಂದ ಮಾಡುವುದಾದರೆ ಅದೇ ನಿಮ್ಮನ್ನು ಕಾಪಾಡುತ್ತದೆ ಎಂದು ಹೇಳಿದರು.ನಗರಸಭೆಯ ಅಧ್ಯಕ್ಷರಾದ ಚಂದ್ರೇಗೌಡ ಅವರು ಮಾತನಾಡಿ ಮಹಾರಾಜನಾಗಿದ್ದ ಗೌತಮ ಬುದ್ಧನು ಸರ್ವಸಂಗ ಪರಿತ್ಯಾಗಿಯಾಗಿ, ರಾಜ್ಯದ ಆಡಳಿತ, ಹೆಂಡತಿ-ಮಕ್ಕಳು, ಕುಟುಂಬ ಪರಿವಾರವಾಗಿ ಎಲ್ಲವನ್ನು ತ್ಯಜಿಸಿ ಸತ್ಯಾನ್ವೇಷಣೆಗಾಗಿ ಹೊರಟಂತಹವರು ಎಂದರು.ಎರಡು ಸಾವಿರ ವರ್ಷಗಳ ಹಿಂದೆ ಅವರು ನೀಡಿರುವ ಕೊಡುಗೆ ಎಷ್ಟು ಅವಿಸ್ಮರಣೀಯವಾದದ್ದು ಎಂಬುದು ಇಂದು ನಮಗೆ ತಿಳಿಯುತ್ತಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಬದುಕನ್ನು ಸಾಗಿಸಬೇಕು ಎಂದು ತಿಳಿಸಿದರು.
ಗೌತಮ ಬುದ್ಧರು ದುಃಖದಿಂದ ಹೊರಬರಲು ಅಷ್ಟಾಂಗ ಮಾರ್ಗಗಳನ್ನು ನೀಡಿದ್ದಾರೆ. ಅವುಗಳನ್ನು ನಮ್ಮ ಮಕ್ಕಳಿಗೂ ಹೇಳಿಕೊಟ್ಟು ನಾವು ಅನುಸರಿಸಿ ಸಂಯಮದಿAದ ಬಾಳಬೇಕು. ಎಲ್ಲರೂ ನೀತಿಯಿಂದ ಜೀವಿಸಬೇಕು ಎಂದರಲ್ಲದೆ ಶಾಂತಿ, ಸಮಾದಾನದಂತಹ ಒಳ್ಳೆಯ ಗುಣಗಳನ್ನು ಅಳವಡಿಸಿಕೊ ಳ್ಳೋಣ ಎಂದು ಹೇಳಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಚ್.ಎಲ್ ಮಲ್ಲೇಶಗೌಡ ಅವರು ಮಾತನಾಡಿ ಬುದ್ಧರ ಕ್ರಿಸ್ಥ ಪೂರ್ವ ಕಾಲಮಾನದಲ್ಲಿ ಜಗತ್ತು ಎಂತಹ ಸತ್ಯಗಳಿಂದ ದೂರವಿದೆ ಎಂಬುದನ್ನು ಬುದ್ಧ ಅವರು ಮತ್ತೊಮ್ಮೆ ನೆನಪಿಸಿಕೊಡುತ್ತಾರೆ ಎಂದರು.
೧೨ನೇ ಶತಮಾನದಲ್ಲಿ ಬಸವಣ್ಣನವರು ಕೂಡ ಬುದ್ಧ ಬೋಧಿಸಿದ ತತ್ವಗಳನ್ನೇ ವಚನಗಳ ಮೂಲಕ ಸಾರಿದ್ದಾರೆ. ಬುದ್ದರ ೭೫೦ ವರ್ಷಗಳ ನಂತರ ಗಾಂಧೀಜಿಯವರು ಕೂಡ ಇವುಗಳನ್ನೇ ಪ್ರಸ್ತಾಪ ಮಾಡಿದ್ದಾರೆ. ಈ ಮೂವರು ಪರಂಪರೆಯ ತ್ರಿಮೂರ್ತಿಗಳಾ ಗಿದ್ದಾರೆ. ಅವರೆಲ್ಲರನ್ನು ಮರೆಯದೆ ಅವರ ತತ್ವಗಳನ್ನು ಅನುಷ್ಠಾನಕ್ಕೆ ತಂದ ಮಹಾನುಭವರು ಡಾ.ಬಿ.ಆರ್ ಅಂಬೇಡ್ಕರ್ ಆಗಿದ್ದಾರೆ. ಇಂತಹ ಮಹಾನುಭಾವರ ತತ್ವಗಳನ್ನು ನೆನಪಿಸಿಕೊಳ್ಳು ವುದು ಮಾತ್ರವಲ್ಲದೆ ಅನುಷ್ಠಾನಕ್ಕೆ ತರುವಂತಹ ಪ್ರಯತ್ನವನ್ನು ಮಾಡಬೇಕು ಎಂದು ಅವರು ತಿಳಿಸಿದರು.ಬೆಂಗಳೂರಿನ ಅಕ್ಕ ಐ.ಎ.ಎಸ್. ಅಕಾಡೆಮಿಯ ಮುಖ್ಯಸ್ಥರಾದ ಡಾ.ಶಿವಕುಮಾರ್ ಅವರು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಗೌತಮ ಬುದ್ಧ ಆದಿ ಗುರು, ಮಹಾ ಗುರು ಆಗಿದ್ದಾರೆ. ಬಾಲ್ಯದಿಂದಲೇ ಬಹಳ ಪರವಶವಾದ ವ್ಯಕ್ತಿತ್ವ, ತನ್ಮಯತೆಯುಳ್ಳ ಮನಸ್ಥಿತಿ, ಧ್ಯಾನಸ್ಥ ವ್ಯಕ್ತಿತ್ವ ಹಾಗೂ ಎಲ್ಲಾ ಜೀವಿಗಳ ಮೇಲೆ ದಯೆ, ಅನುಕಂಪ ತೋರಿಸುವಂತಹ ಗುಣವುಳ್ಳವರಾಗಿದ್ದ ಇವರು ಶಾಂತಿಯ ಸಂಕೇತವಾಗಿದ್ದಾರೆ ಎಂದರು.
ಗೌತಮ ಬುದ್ಧರ ಮೊದಲ ಹೆಸರು ಸಿದ್ದಾರ್ಥ ಎಂದಾಗಿದೆ. ಇಂದಿಗೆ ೨೫೬೯ ವರ್ಷಗಳ ಹಿಂದೆ ಉತ್ತರ ಪ್ರದೇಶದ ಶಾಖ್ಯ ವಂಶದಲ್ಲಿ ಜನಿಸಿದವರಾಗಿ ದ್ದಾರೆ ಇವರ ತಂದೆ ಶುದ್ಧೋದನ, ತಾಯಿ ಮಹಾಮಾಯೆ. ಸಿದ್ದಾರ್ಥನಿಗೆ ಬಾಲ್ಯದಿಂದಲೇ ಕೆಲವು ಮೂಲಭೂತ ಪ್ರಶ್ನೆಗಳು ಕಾಡುತ್ತಿದ್ದವು ಅವುಗಳಿಗೆ ಉತ್ತರವನ್ನು ಕಂಡುಕೊಳ್ಳಲು ದೇಹವನ್ನು ದಂಡಿಸಿ, ಉಪವಾಸ ಮಾಡಿ ಬುದ್ಧ ಗಯಾದಲ್ಲಿ ೨೮ ದಿನಗಳ ಕಾಲ ಬೋಧಿವೃಕ್ಷದ ಕೆಳಗೆ ಕುಳಿತಾಗ ವಿಪಸನದ ಮೂಲಕ ಜ್ಞಾನೋದಯವಾಯಿತು ಎಂದು ತಿಳಿಸಿದರು.ಜಗತ್ತು ಅಜ್ಞಾನದಲ್ಲಿರುವಾಗ ಬುದ್ಧನು ಪರಿಪೂರ್ಣ ಜ್ಞಾನವನ್ನು ಪಡೆದ. ನಂತರ ತನ್ನ ಮೊದಲ ಬೋಧನೆಯನ್ನು ಸಾರಾನಾಥಾದ ಜಿಂಕೆವನದಲ್ಲಿ ತನ್ನ ಐದು ಜನ ಸ್ನೇಹಿತರಿಗೆ ಬೋಧಿಸಿದನು. ಈ ದಿನವನ್ನು ಧರ್ಮಚಕ್ರ ಪರಿವರ್ತನಾ ದಿನ ಅಥವಾ ಗುರುಪೂರ್ಣಿಮೆ ಎಂದು ಕರೆಯುತ್ತಾರೆ ಎಂದರು.ಪರಿಶುದ್ಧವಾದ ದೇಹ, ಮನಸ್ಸು, ಮಾತಿಗಾಗಿ ಪಂಚಶೀಲ ತತ್ವಗಳನ್ನು ಅಳವಡಿಸಿಕೊಳ್ಳುವಂತೆ ಗೌತಮ ಬುದ್ಧನು ತಿಳಿಸಿದ್ದಾನೆ. ಜೊತೆಗೆ ಪ್ರತಿಯೊಬ್ಬ ವ್ಯಕ್ತಿಯು ನಿರಂತರವಾಗಿ ಪಂಚಶೀಲ ತತ್ವ ಮತ್ತು ಅಷ್ಟಾಂಗ ಮಾರ್ಗಗಳನ್ನು ಅನುಸರಿಸಬೇಕು ಎಂದು ಗೌತಮ ಬುದ್ಧನ ಕುರಿತು ಸವಿವರವಾಗಿ ಉಪನ್ಯಾಸ ನೀಡಿದರು.
ಬೌದ್ಧ ಬಿಕ್ಕು ಧರ್ಮಬೋಧಿ ಅವರು ಮಾತನಾಡಿ ಪ್ರಪಂಚ ಅಶಾಂತಿಯಲ್ಲಿರುವಾಗ ಗೌತಮ ಬುದ್ಧ ಅವರು ಜನಿಸಿದರು, ಇವರು ಜಗತ್ತಿಗೆ ಬೆಳಕಾಗಿದ್ದಾರೆ. ತಮ್ಮ ಜೀವನದ ಎಲ್ಲಾ ಸುಖ ಭೋಗಗಳನ್ನು ತ್ಯಾಗ ಮಾಡಿ ಸನ್ಯಾಸಿಯಾಗಿದ್ದಾರೆ ಬುದ್ಧ ಜನಿಸಿದ್ದು ಅವರಿಗೆ ಜ್ಞಾನೋದಯವಾದದ್ದು ಮತ್ತು ಅವರು ಪರಿನಿರ್ವಾಣ ಹೊಂದಿದ್ದು ಒಂದೇ ದಿನವಾಗಿದೆ ಎಂದು ಅವರ ಕುರಿತು ಅವರ ತತ್ವಗಳ ಕುರಿತು ತಿಳಿಸಿದರು.ಇದೇ ಸಂದರ್ಭ ಕಾರ್ಯಕ್ರಮ ದಲ್ಲಿ ಹೊಯ್ಸಳ ಚಿತ್ರಕಲಾ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತಮ ಚಿತ್ರವನ್ನು ಬಿಡಿಸಿರುವಂಥ ವರಿಗೆ ಪ್ರಮಾಣ ಪತ್ರಗಳನ್ನು ನೀಡಲಾಯಿತು.ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಚಂದ್ರಶೇಖರ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ದೂದ್ ಪೀರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಹೆಚ್.ಪಿ ತಾರಾನಾಥ್, ಸಮುದಾಯದ ಮುಖಂಡರು, ಮತ್ತಿತರರು ಉಪಸ್ಥಿತರಿದ್ದರು.