
IPL 2025: ಐಪಿಎಲ್ ಸೀಸನ್-18 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು 2ನೇ ಗೆಲುವು ದಾಖಲಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ (MI) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಡೆಲ್ಲಿ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಮುಂಬೈ ಇಂಡಿಯನ್ಸ್ ತಂಡವು ತಿಲಕ್ ವರ್ಮಾ (59) ಅವರ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 205 ರನ್ ಕಲೆಹಾಕಿತು.206 ರನ್ಗಳ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆದರೆ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಕನ್ನಡಿಗ ಕರುಣ್ ನಾಯರ್ ವಿಸ್ಪೋಟಕ ಇನಿಂಗ್ಸ್ ಆಡಿದರು. ಕೇವಲ 40 ಎಸೆತಗಳನ್ನು ಎದುರಿಸಿದ ಕರುಣ್ 5 ಭರ್ಜರಿ ಸಿಕ್ಸ್ ಹಾಗೂ 12 ಫೋರ್ಗಳೊಂದಿಗೆ 89 ರನ್ ಚಚ್ಚಿದರು.ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಓವರ್ಗಳಲ್ಲೇ 150 ರನ್ಗಳ ಗಡಿದಾಟಿತು. ಆದರೆ ಆ ಬಳಿಕ ನಾಟಕೀಯ ಕುಸಿತಕ್ಕೊಳಗಾಗಿ 19 ಓವರ್ಗಳಲ್ಲಿ 193 ರನ್ಗಳಿಸಿ ಆಲೌಟ್ ಆಯಿತು. ಈ ಮೂಲಕ ಮುಂಬೈ ಇಂಡಿಯನ್ಸ್ ತಂಡ 12 ರನ್ಗಳ ರೋಚಕ ಜಯ ಸಾಧಿಸಿದೆ.
ಈ ಗೆಲುವಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ತಂಡದ ಯಶಸ್ಸಿಗೆ ಸಂತಸ ವ್ಯಕ್ತಪಡಿಸಿದರು. ಗೆಲುವು ಯಾವಾಗಲೂ ವಿಶೇಷ, ವಿಶೇಷವಾಗಿ ಈ ರೀತಿಯ ಗೆಲುವುಗಳು ತುಂಬಾ ಖುಷಿ ನೀಡುತ್ತದೆ. ಏಕೆಂದರೆ ಒಂದು ಹಂತದಲ್ಲಿ ನಾವು ಪಂದ್ಯವನ್ನು ಕಳೆದುಕೊಂಡಿದ್ದೆವೆ.ಕರುಣ್ ನಾಯರ್ ಬ್ಯಾಟಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು. ಅವರ ಸಿಡಿಲಬ್ಬರದಿಂದಾಗಿ ಪಂದ್ಯವೇ ಕೈ ತಪ್ಪಿ ಹೋಯಿತು ಎಂದೇ ಭಾವಿಸಿದ್ದೆ. ಅಂತಹದೊಂದು ಇನಿಂಗ್ಸ್ ಅವರು ಆಡಿದ್ದರು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.ಇದಾಗ್ಯೂ ಕರ್ಣ್ ಶರ್ಮಾ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. ಬೌಂಡರಿ ಲೈನ್ಗಳು ಕೇವಲ 60 ಮೀಟರ್ ಉದ್ದವಿರುವಾಗ ಕೆಲ ಎಸೆತಗಳನ್ನು ಎಸೆಯಲು ದೈರ್ಯ ಬೇಕಿರುತ್ತದೆ. ಅದನ್ನು ಕರ್ಣ್ ಶರ್ಮಾ ಮಾಡಿ ತೋರಿಸಿದರು. ಇದರಿಂದಾಗಿ ನಾವು ಕಂಬ್ಯಾಕ್ ಮಾಡಲು ಸಾಧ್ಯವಾಯಿತು.