ಇತ್ತೀಚಿನ ಸುದ್ದಿದೇಶಸುದ್ದಿ

ಗೂಗಲ್ ಸಂಸ್ಥೆ ಏರ್​ಟೆಲ್​ನಲ್ಲಿ 700 ಮಿಲಿಯನ್ ಡಾಲರ್ ಹೂಡಿಕೆ

ನವದೆಹಲಿ: ಟೆಲಿಕಾಂ ಕಂಪನಿ ಭಾರ್ತಿ ಏರ್​ಟೆಲ್ ಮತ್ತು ಗೂಗಲ್ ಸುಮಾರು 1 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು, ಏರ್​ಟೆಲ್​ನ ಶೇಕಡಾ 1.28ರಷ್ಟು ಪಾಲನ್ನು ಗೂಗಲ್ ತನ್ನದಾಗಿಸಿಕೊಂಡಿದೆ. ಈ ಒಪ್ಪಂದ ಹಲವು ವರ್ಷಗಳ ಅವಧಿಯದ್ದಾಗಿದ್ದು, ಈ ಮೂಲಕ ಭಾರತೀಯ ಡಿಜಿಟಲ್ ವಲಯದಲ್ಲಿ ಅತಿ ದೊಡ್ಡ ಸಂಸ್ಥೆಗಳಾದ ಏರ್​ಟೆಲ್ ಮತ್ತು ಗೂಗಲ್ ಕೆಲವೊಂದು ವಿಚಾರಗಳಲ್ಲಿ ಸಹಭಾಗಿತ್ವ ಸಾಧಿಸಲಿವೆ. ಗೂಗಲ್ ಸಂಸ್ಥೆ ಏರ್​ಟೆಲ್​ನಲ್ಲಿ 700 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದು, ಶೇಕಡಾ 1.28ರಷ್ಟು ಒಡೆತನದ ಪಾಲು ಗೂಗಲ್​​ಗೆ ಸೇರಲಿದೆ. ಇನ್ನುಳಿದ 300 ಮಿಲಿಯನ್ ಡಾಲರ್ ಅನ್ನು ಇತರ ವಾಣಿಜ್ಯ ಚಟುವಟಿಕೆಗಳ ಮೇಲೆ ಗೂಗಲ್ ಹೂಡಿಕೆ ಮಾಡಿದೆ. ಇದರಿಂದ ಏರ್​ಟೆಲ್​ ಮೇಲೆ ಒಟ್ಟು 1 ಬಿಲಿಯನ್ ಡಾಲರ್ ಅನ್ನು ಗೂಗಲ್ ಹೂಡಿಕೆ ಮಾಡಿದೆ.

ನೆಟ್‌ವರ್ಕ್, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು, ಪೇಮೆಂಟ್ ಮುಂತಾದವುಗಳ ವಿಚಾರದಲ್ಲಿ ಭಾರತದ ಡಿಜಿಟಲ್ ಪರಿಸರವನ್ನು ಮತ್ತಷ್ಟು ವಿಸ್ತಾರಗೊಳಿಸಲು ನಾವು ಗೂಗಲ್​ನೊಂದಿಗೆ ನಿಕಟವಾಗಿ ಕೆಲಸ ಮಾಡಲು ನಿರೀಕ್ಷಿಸುತ್ತಿದ್ದೇವೆ ಎಂದು ಭಾರ್ತಿ ಏರ್​ಟೆಲ್ ಅಧ್ಯಕ್ಷ ಸುನಿಲ್ ಭಾರ್ತಿ ಮಿತ್ತಲ್ ಹೇಳಿದ್ದಾರೆ. ಈ ಒಪ್ಪಂದವು ಅಗತ್ಯ ನಿಯಂತ್ರಣಗಳನ್ನು ಹೊಂದಿರುತ್ತದೆ. ವಾಣಿಜ್ಯ ಒಪ್ಪಂದಗಳೂ ಆಗಿದ್ದು, ಏರ್​ಟೆಲ್ ಮತ್ತು ಗೂಗಲ್ ಆ್ಯಂಡ್ರಾಯ್ಡ್​ ಉತ್ಪನ್ನಗಳಲ್ಲಿ ಅಭಿವೃದ್ಧಿ ವಿಚಾರವಾಗಿ ಕೆಲಸ ಮಾಡುತ್ತವೆ ಎಂದು ತಿಳಿದು ಬಂದಿದೆ. ಏರ್‌ಟೆಲ್ ಈಗಾಗಲೇ ಗೂಗಲ್​ನ 5ಜಿ ಅನ್ನು ಮತ್ತು ಕೆಲವೊಂದು ಸಾಫ್ಟ್​ವೇರ್​ಗಳನ್ನು ಬಳಸುತ್ತಿದ್ದು, ಈ ಒಪ್ಪಂದದಿಂದಾಗಿ ಏರ್​ಟೆಲ್ ತನ್ನ ಗ್ರಾಹಕರಿಗೆ ಮತ್ತಷ್ಟು ಹೊಸ ಯೋಜನೆಗಳನ್ನು ಮತ್ತು ಸೇವೆಗಳನ್ನು ತರುವ ಸಾಧ್ಯತೆ ಇರುತ್ತದೆ.

Related Articles

Leave a Reply

Your email address will not be published. Required fields are marked *

Back to top button