ಪುರಾತನ ಕಾಲದಿಂದಲೂ ನಡೆದು ಬಂದಿರುವ ಈ ಪ್ರಕೃತ್ತಿ(Nature) ಪೂಜೆಗೆ ಅತ್ಯುತ್ತಮ ಉದಾಹರಣೆ ಎಂದರೆ ಭೂಮಿ ಹುಣ್ಣಿಮೆ(Bhumi Hunnime). ಈ ಹಬ್ಬವನ್ನು ಮಲೆನಾಡು(Malnad) ಭಾಗದ ರೈತರು ಆಚರಿಸುತ್ತಾರೆ. ಸಂಭ್ರ,ಮ ಸಡಗರದಿಂದ ಭೂಮಿ ತಾಯಿಯನ್ನು ಆರಾಧಿಸುವ ಹಬ್ಬ ಇದು.
ಭೂ ತಾಯಿ ಸೀಮಂತ
ಇದು ಭೂಮಿ ತಾಯಿ ಗರ್ಭೀಣಿಯಾಗಿರುವ ಸಂಕೇತ. ಹಾಗಾಗಿ ತುಂಬಿದ ಗರ್ಭಿಣಿಗೆ ಯಾವ ರೀತಿ ಬಯಕೆ ಶಾಸ್ತ್ರ ಮಾಡಲಾಗುತ್ತದೆಯೋ ಹಾಗೆಯೇ ಭೂಮಿ ಹುಣ್ಣಿಮೆಯಂದು ಸಹ ಮಾಡಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಜನಪದೀಯ ಆಚರಣೆಗಳು ಅತ್ಯಂತ ವೈಶಿಷ್ಟಪೂರ್ಣವಾಗಿರುತ್ತದೆ .ಹಬ್ಬಕ್ಕೆ ಕೆಲವು ದಿನಗಳ ಮುಂಚಿತವಾಗಿಯೇ ಹೊಲಕ್ಕೆ ತೆಗೆದುಕೊಂಡು ಹೋಗಲು ಎಂದು ಎರಡು ಭೂಮಣ್ಣಿ ಬುಟ್ಟಿಗಳನ್ನು ಮಹಿಳೆಯರೇ ತಯಾರಿಸುತ್ತಾರೆ. ಈ ಬುಟ್ಟಿಯಲ್ಲಿ ಪೂಜೆಯ ಸಾಮಾಗ್ರಿಗಳು ಹಾಗೂ ಊಟದ ಪದಾರ್ಥಗಳನ್ನು ತೆಗದುಕೊಂಡು ಹೋಗುವ ಪದ್ದತಿ ಇದೆ.
ಬುಟ್ಟಿ ಮಾಡುವ ವಿಧಾನ
ಬುಟ್ಟಿಗೆ ಸಗಣಿ, ಕೆಮ್ಮಣ್ಣು ಹಚ್ಚಿ ನಂತರ ಅದರ ಮೇಲೆ ಅಕ್ಕಿ ಹಿಟ್ಟಿನಲ್ಲಿ ಹಸೆ ಚಿತ್ತಾರವನ್ನು ಬಿಡಿಸಲಾಗುತ್ತದೆ. ಮಲೆನಾಡಿನ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಚಿತ್ಥಾರಗಳನ್ನು ಬುಟ್ಟಿಯ ಮೇಲೆ ಬಿಡಿಸಲಾಗುತ್ತದೆ.
ಹಬ್ಬದ ತಯಾರಿ
ಹಬ್ಬದ ಹಿಂದಿನ ದಿನ ಜಮೀನಿನ ಸ್ಥಳವನ್ನು ಸ್ವಚ್ಚ ಮಾಡಲಾಗುತ್ತದೆ. ಕೆಲವರು ಬಾಳೆ ಗಿಡ ಮತ್ತು ಮಾವಿನ ಎಲೆಗಳನ್ನು ಬಳಸಿ ಮಂಟಪ ತಯಾರಿಸುತ್ತಾರೆ.ಅಲ್ಲದೇ ಮಣ್ಣಿನಲ್ಲಿ ಭೂ ತಾಯಿಯ ಮುಖವನ್ನು ತಯಾರು ಮಾಡಲಾಗುತ್ತದೆ. ಹಬ್ಬದ ಹಿಂದಿನ ದಿನ ರಾತ್ರಿ ತಮ್ಮ ಹಿತ್ತಲಲ್ಲಿ ಬೆಳೆದ ಹಿರೇಕಾಯಿ, ಕುಂಬಳಕಾಯಿ, ಬದನೆಕಾಯಿ, ಮೊದಲಾದ ತರಕಾರಿಗಳನ್ನು ಹೆಚ್ಚಿ ಹಚ್ಚಂಬಲಿ ಎನ್ನುವ ವಿಭಿನ್ನವಾದ ಪದಾರ್ಥವನ್ನು ತಯಾರಿಸಲಾಗುತ್ತದೆ. ಕೆಲ ಭಾಗಗಳಲ್ಲಿ ಈ ಹಬ್ಬಕ್ಕೆ ವಾರಗಳ ಮೊದಲೇ ತಯಾರಿ ನಡೆಯುತ್ತದೆ. ಹೋಳಿಗೆ, ಸಜ್ಜಿಗೆ ಹೀಗೆ ವಿವಿಧ ಬಗೆಯ ಪದಾರ್ಥಗಳನ್ನು ತಯಾರಿಸುತ್ತದೆ.
ನಂತರ ಮರುದಿನ ಬೆಳಗ್ಗೆ ಅದನ್ನು ತೆಗೆದುಕೊಂಡು ಹೋಗಿ ಕೃಷಿ ಭೂಮಿಗೆ ಹಾಕಲಾಗುತ್ತದೆ. ನಂತರ ಮನೆಯಲ್ಲಿ ತಯಾರಾದ ಅಡುಗೆಯನ್ನು ಬುಟ್ಟಿಯಲ್ಲಿ ತೆಗೆದುಕೊಂಡು ಕುಟುಂಬದ ಎಲ್ಲಾ ಸದಸ್ಯರು ಜಮೀನಿಗೆ ಹೋಗುತ್ಥಾರೆ. ಭತ್ತದ ಪೈರಿಗೆ ಹೆಣ್ಣುಮಕ್ಕಳು ತಮ್ಮ ತಾಳಿ ಸರವನ್ನೇ ಬಿಚ್ಚಿ ತೋರಣವಾಗಿ ಕಟ್ಟಿ ಪೂಜೆ ಸಲ್ಲಿಸುವ ಅಪರೂಪದ ಸಂಪ್ರದಾಯವಿದೆ.
ಭತ್ತದ ಪೈರಿಗೆ ಪೂಜೆ ಸಲ್ಲಿಸಿದ ನಂತರ ಆಹಾರದ ಎಡೆಯನ್ನು ಮಾಡಿ ಕಾಗೆಗೆ ನೀಡುತ್ತಾರೆ. ಈ ಸಂಪ್ರದಾಯಕ್ಕೆ ಕಾರಣವೆಂದರೆ, ನಿಧನರಾದ ಕುಟುಂಬದ ಹಿರಿಯರು ಬಂದು ಈ ಆಹಾರ ಸ್ವೀಕರಿಸುತ್ತಾರೆ ಎಂಬ ನಂಬಿಕೆ ಇದೆ. ಈ ಪದ್ಧತಿಯನ್ನು ಪ್ರತಿಯೊಬ್ಬರೂ ಮಾಡುವುದಿಲ್ಲ. ಕೆಲವರು ಮಾತ್ರ ಮಾಡುತ್ತಾರೆ. ಭೂಮಿ ಹುಣ್ಣಿಮೆ ಹಬ್ಬದ ವೇಳೆಯಲ್ಲಿ ಇಲಿಗೂ ಒಂದು ಎಡೆ ನೀಡಿ ನಮ್ಮ ಬೆಳೆಗೆ ತೊಂದರೆ ಕೊಡಬೇಡ ಎಂದು ಪ್ರಾರ್ಥಿಸಲಾಗುತ್ತದೆ. ಪೂಜೆ ವೇಳೆಯಲ್ಲಿ ಒಂದು ಕಡುಬನ್ನು ಗದ್ದೆಯ ಕೆಲವು ಸಸಿಗಳನ್ನು ಕಿತ್ತು ಅದರ ಕೆಳಗೆ ಹುಗಿಯಲಾಗುತ್ತೆ.