ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವತಿಯನ್ನು ಹೆಂಡತಿ ಕಿಡ್ನ್ಯಾಪ್ !
ಗಂಡಾಗಲಿ, ಹೆಣ್ಣಾಗಲಿ ತನ್ನ ಗಂಡ/ಹೆಂಡತಿ ತನ್ನನ್ನು ಧಿಕ್ಕರಿಸಿ ಮತ್ತೊಬ್ಬಳು/ಮತ್ತೊಬ್ಬನ ತೆಕ್ಕೆಯಲ್ಲಿದ್ದಾರೆ ಎಂಬ ಸಂಗತಿ ಎಂಥವರನ್ನೂ ಉಗ್ರರನ್ನಾಗಿ ಮಾಡುತ್ತೆ. ಇಲ್ಲಿ ಹೆಂಡತಿಯೊಬ್ಬರು ಗಂಡನ ಅಕ್ರಮ ಸಂಬಂಧದ ಬಗ್ಗೆ ವಿಕೃತವಾಗಿ ವರ್ತಿಸಿದ್ದಾಳೆ.
ಗುಜರಾತ್ ನ ರಾಜ್ ಕೋಟ್ ನಲ್ಲಿ ಈ ಘಟನೆ ನಡೆದಿದೆ. ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಯುವತಿಯನ್ನು ಹೆಂಡತಿ ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ.
ರಾಜ್ಕೋಟ್ ಪ್ರದೇಶದ ಅವಧ್ ರಸ್ತೆಯಲ್ಲಿ ಯುವತಿಯೊಬ್ಬಳು ಗಂಭೀರವಾಗಿ ಗಾಯಗೊಂಡು ರಸ್ತೆ ಬದಿ ಬಿದ್ದಿದ್ದಾಳೆ ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ನಂತರ ಆಕೆಯಿಂದ ಹೇಳಿಕೆ ಪಡೆಯಲಾಯಿತು. ತನ್ನ ಪ್ರಿಯಕರನ ಹೆಂಡತಿ ಹೀಗೆ ಅಮಾನುಷವಾಗಿ ಥಳಿಸಿದ್ದಾಳೆ ಎಂದು ಯುವತಿ ಹೇಳಿದಾಗ ಪೊಲೀಸರು ಬೆಚ್ಚಿಬಿದ್ದಿದ್ದಾರೆ.
ತನ್ನ ಗೆಳೆಯನ ಹೆಂಡತಿ, ಇಬ್ಬರು ಯುವಕರ ಸಹಾಯದಿಂದ ತನ್ನನ್ನು ಅಪಹರಿಸಿದ್ದಾಳೆ. ಮೂವರು ತನ್ನ ಮೇಲೆ ಹಲ್ಲೆ ಮಾಡಿ, ರಸ್ತೆ ಬದಿ ಬಿಸಾಡಿದ್ದಾರೆ ಎಂದು ಯುವತಿ ಹೇಳಿಕೆ ನೀಡಿದ್ದಾಳೆ.
ಕೇವಲ ಹಲ್ಲೆ ಮಾತ್ರವಲ್ಲ ಯುವತಿ ಮೇಲೆ ವಿಕೃತಿ ಮೆರೆಯಲಾಗಿದೆ. ಯುವತಿಯ ಕೈಕಾಲಿಗಳನ್ನು ಕಟ್ಟಿ, ಆಕೆಯ ಗುಪ್ತಾಂಗಕ್ಕೆ ಮೆಣಸಿನಪುಡಿ ಎರಚಿ ಹಿಂಸಿಸಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.
ಸದ್ಯ ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಂತ್ರಸ್ತೆಯ ಗೆಳೆಯನ ಪತ್ನಿ ಹಾಗೂ ಆಕೆಗೆ ಸಹಕರಿಸಿದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.