ದೇಶ

ಖಾಸಗಿ ಪ್ರಯೋಗಾಲಯಗಳಲ್ಲೂ ‘ಜೀನೋಮ್ ಸೀಕ್ವೆನ್ಸಿಂಗ್’ ಪರೀಕ್ಷೆ ನಡೆಸಲು ಅನುಮತಿ!

ಬೆಂಗಳೂರು: ‘ಜೀನೋಮ್ ಸೀಕ್ವೆನ್ಸಿಂಗ್’ ಪರೀಕ್ಷೆಗಳನ್ನು ಖಾಸಗಿ ಪ್ರಯೋಗಾಲಯಗಳಲ್ಲಿ ನಡೆಸಲು ಕೊನೆಗೂ ಕೇಂದ್ರ ಸರ್ಕಾರ ಅನುಮತಿ ನೀಡಿದೆ.

ರೂಪಾಂತರಿ ವೈರಸ್ ಗಳ ಮೇಲೆ ಕಣ್ಗಾವಲಿರಿಸುವ ಸಲುವಾಗಿ ಕಳೆದ ಜನವರಿ ತಿಂಗಳಿನಲ್ಲಿ ಸಾರ್ಸ್‍ಕೋವ್-2 ಜೆನೊಮಿಕ್ಸ್‌ ಕಾನ್ಸೋರ್ಟಿಯಮ್’ (ಐಎನ್‍ಎಸ್‍ಎಸಿಒಜಿ) ವೇದಿಕೆಯನ್ನು ರಚಿಸಲಾಗಿತ್ತು. ದೇಶದಲ್ಲಿ ರೂಪಾಂತರಿ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇದನ್ನು ಪತ್ತೆ ಹಚ್ಚುವ ಸಲುವಾಗಿ ಈ ವೇದಿಕೆಯು ಇದೀಗ ಖಾಸಗಿ ಪ್ರಯೋಗಾಲಯಗಳಿಗೂ ‘ಜೀನೋಮ್ ಸೀಕ್ವೆನ್ಸಿಂಗ್’ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ಐಎನ್‍ಎಸ್‍ಎಸಿಒಜಿಯು, ಖಾಸಗಿ ಪ್ರಯೋಗಾಲಯಗಳೊಂದಿಗೆ ಸಭೆ ನಡೆಸಲಾಗಿದ್ದು, ಈ ಪ್ರಯೋಗಾಲಯಗಳ ಅಭಿಪ್ರಾಯ ಹಾಗೂ ಆಸಕ್ತಿಯ ಆಧಾರದ ಮೇಲೆ ಕೆಲ ಮಾರ್ಗಸೂಚಿಗಳೊಂದಿಗೆ ಖಾಸಗಿ ಪ್ರಯೋಗಾಲಯಗಳಲ್ಲೂ ‘ಜೀನೋಮ್ ಸೀಕ್ವೆನ್ಸಿಂಗ್’ ನಡೆಸಲು ಅನುಮತಿ ನೀಡಲಾಗಿದೆ ಎಂದು ಹೇಳಿದೆ.

ಮಹಾಜನ್ ಇಮೇಜಿಂಗ್ ಪ್ರೈವೇಟ್ ಲಿಮಿಟೆಡ್‌, ನವದೆಹಲಿ; ಸ್ಟ್ರಾಂಡ್ಸ್ ಲೈಫ್ ಸೈನ್ಸಸ್, ಬೆಂಗಳೂರು; ಜೀನೋಟೈಪಿಕ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್, ಬೆಂಗಳೂರು; ಎನ್‌ಎಂಸಿ ಜೆನೆಟಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗುರ್ಗಾಂವ್; ಮ್ಯಾಪ್‌ಮಿಜೆನೊಮ್ ಇಂಡಿಯಾ ಲಿಮಿಟೆಡ್, ಹೈದರಾಬಾದ್ ಮತ್ತು ಪ್ರೇಮಾಸ್ ಲೈಫ್ ಸೈನ್ಸಸ್, ನವದೆಹಲಿಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿದುಬಂದಿದೆ.

ಖಾಸಗಿ ವಲಯದ ಪ್ರಯೋಗಾಲಯಗಳ ಪರಿಣತಿ ಮತ್ತು ಅನುಭವದ ಆಧಾರದ ಮೇಲೆ, ಮಾರ್ಗಸೂಚಿಗಳೊಂದಿಗೆ ಕೋವಿಡ್ -19 ವೈರಸ್‌ನ ಜೀನೋಮ್ ಸೀಕ್ವೆನ್ಸಿಂಗ್‌ಗಾಗಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಉತ್ತಮವೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ.

ಐಎನ್‍ಎಸ್‍ಎಸಿಒಜಿ ಆರಂಭದಲ್ಲಿ 10 ಪ್ರಯೋಗಾಲಯಗಳನ್ನು ಒಳಗೊಂಡಿತ್ತು, ಇದು ಭಾರತದ ವಿವಿಧ ರಾಜ್ಯಗಳಿಂದ 60,000 ಪಾಸಿಟಿವ್ ಪ್ರಕರಣಗಳ ಜೀನೋಮಿಕ್ ಅನುಕ್ರಮವನ್ನು ನಡೆಸಿತ್ತು. ಬಳಿಕ ಇದರೊಂದಿಗೆ ಇನ್ನೂ 18 ಪ್ರಯೋಗಾಲಯಗಳನ್ನು ಸೇರ್ಪಡೆಗೊಳಿಸಲಾಯಿತು.

ದೇಶದಲ್ಲಿ ‘ಜೀನೋಮ್ ಸೀಕ್ವೆನ್ಸಿಂಗ್’ ಪರೀಕ್ಷೆಗಳನ್ನು ಹೆಚ್ಚಳ ಮಾಡುವ ಅಗತ್ಯವಿದೆ. ಪ್ರತೀ ತಿಂಗಳು 80,000 ಪಾಸಿಟಿವ್ ಪ್ರಕರಣಗಳ ಜೀನೋಮಿಕ್ ಅನುಕ್ರಮವನ್ನು ನಡೆಸುವ ಗುರಿ ಹೊಂದಲಾಗಿದೆ. ಹೀಗಾಗಿ ಖಾಸಗಿ ಪ್ರಯೋಗಾಲಯಗಳನ್ನೂ ಪಾಲ್ಗೊಳ್ಳುವಂತೆ ಮಾಡುವುದು ಅಗತ್ಯವಾಗಿದೆ ಎಂದು ಐಎನ್‍ಎಸ್‍ಎಸಿಒಜಿ ತಿಳಿಸಿದೆ.

ಸರ್ಕಾರದ ಈ ಕ್ರಮವನ್ನು ಶ್ಲಾಘಿಸಿರುವ ಪ್ರಸಿದ್ಧ ಕ್ಯಾನ್ಸರ್ ತಜ್ಞ ಮತ್ತು ಜೀನೋಮ್ ಸಮಿತಿಯ ಸದಸ್ಯ, ಕರ್ನಾಟಕ ಸರ್ಕಾರ, ಡಾ. ವಿಶಾಲ್ ರಾವ್ ಅವರು, ಎಲ್ಲಾ ವಿಜ್ಞಾನಿಗಳು, ತಜ್ಞರು ಇಂತಹ ಪ್ರಯೋಗಗಳಲ್ಲಿ ಪಾಲ್ಗೊಳ್ಳುವುದು ಮುಖ್ಯವಾಗಿದೆ. ಈ ಬೆಳವಣಿಗೆಯು ರೂಪಾಂತರಿ ವೈರಸ್ ಗಳ ವಿರುದ್ಧದ ಹೋರಾಟವನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಹೇಳಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button