ಕ್ಷುಲ್ಲಕ ಪಿಐಎಲ್ ಹಾಕಿದರೆ ದಂಡ ವಿಧಿಸಲಾಗುವುದು… ಹೈ ಕೋರ್ಟ್ ಎಚ್ಚರಿಕೆ.!
ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿ ವೈಯುಕ್ತಿಕ ಹಿತಾಸಕ್ತಿ ಅಡಗಿರುವುದು ಅಥವಾ ಕ್ಷುಲ್ಲಕ ವಿಚಾರವಿರುವುದು ಸಾಬೀತಾದರೆ ಅರ್ಜಿದಾರರಿಗೆ ಕನಿಷ್ಠ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹೈಕೋರ್ಟ್ ಸುಖಾಸುಮ್ಮನೆ ಪಿಐಎಲ್ ಹೂಡುವವರಿಗೆ ವಾರ್ನಿಂಗ್ ನೀಡಿದೆ.
ಇತ್ತೀಚಿನ ದಿನಗಳಲ್ಲಿ ಅನಗತ್ಯ ಪಿಐಎಲ್ ಸಲ್ಲಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಆಲೋಕ್ ಆರಾಧೆ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಕುರಿತು ಆದೇಶ ನೀಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ವಕೀಲರ ವಾದ ಮಂಡನೆಯಲ್ಲಿಅರ್ಜಿದಾರರ ವೈಯುಕ್ತಿಕ ಹಿತಾಸಕ್ತಿ ಇರುವ ಅನುಮಾನಗಳು ಬಂದಿರುವುದರಿಂದ ಮತ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್ ಪಡೆಯುವುದಾಗಿ ಮೆಮೊ ಸಲ್ಲಿಸಿದ ಬೆಳವಣಿಗೆಗಳನ್ನು ಗಮನಿಸಿ ನ್ಯಾಯಪೀಠ ಈ ಮೌಖಿಕ ಆದೇಶ ಹೊರಡಿಸಿತು.
ಯಾವುದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು (ಪಿಐಎಲ್) ಕ್ಷುಲ್ಲಕ ಅಥವಾ ವೈಯುಕ್ತಿಕ ಹಿತಾಸಕ್ತಿ ಅಡಗಿರುವುದು ಮೇಲ್ನೋಟಕ್ಕೆ ಋುಜುವಾತು ಆದಲ್ಲಿ ಸೋಮವಾರದಿಂದ ಅರ್ಜಿದಾರರಿಗೆ ಕನಿಷ್ಠ 50 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿತು.
ಶುಕ್ರವಾರ ಕೋರ್ಟ್ ಕಲಾಪದ ವೇಳೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಾಪಸ್ ಪಡೆದುಕೊಳ್ಳಲಾಗುವುದು, ಬೇಡಿಕೆ ಈಡೇರಿದೆ ಅರ್ಜಿ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಎರಡು ಪ್ರತ್ಯೇಕ ಅರ್ಜಿಗಳಲ್ಲಿಅರ್ಜಿದಾರರ ಪರ ವಕೀಲರು ವಾದ ಮಂಡಿಸಿರುವುದನ್ನು ಆಕ್ಷೇಪಿಸಿದ ನ್ಯಾಯಪೀಠ, ಒಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿ ಕೋರ್ಟ್ ಮುಂದೆ ವಿಚಾರಣೆಗೆ ಇರುವಾಗ ಅದನ್ನು ವಾಪಸ್ ಪಡೆಯಲು ಅವಕಾಶವಿಲ್ಲಎಂದು 1988ರಲ್ಲಿಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಅಲ್ಲದೇ, ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಲ್ಲಿವಕೀಲರು ತಮ್ಮ ಕಕ್ಷಿದಾರರ ವೈಯುಕ್ತಿಕ ಹಿತಾಸಕ್ತಿಗೆ ಪೂರಕವಾಗಿ ವಾದ ಮಂಡಿಸುವುದು ಬೇಸರದ ಸಂಗತಿ. ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಗೆ ಅವಸರ ಮಾಡುವುದು, ಸಿನಿಯರ್ ಬ್ಯುಸಿ ಇದ್ದಾರೆ, ಆರೋಗ್ಯ ಸರಿ ಇಲ್ಲಎಂದು ಕಾರಣಗಳನ್ನು ಕೊಟ್ಟು ಮುಂದೂಡಿಕೆ ತೆಗೆದುಕೊಳ್ಳುವುದು ನ್ಯಾಯಸಮ್ಮತ ನಡೆ ಅಲ್ಲ. ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯಾವುದೇ ಕಾರಣಕ್ಕೂ ವೈಯುಕ್ತಿ ಹಿತಾಸಕ್ತಿ ಆಗಬಾರದು ಎಂದು ಹೇಳಿತು.
25 ಸಾವಿರ ರೂ. ದಂಡ:
ಇದೇ ವೇಳೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮೇಡಮಾರನಹಳ್ಳಿ ಕೆರೆ ಜಾಗ ಒತ್ತುವರಿ ಮಾಡಿ ಮಸೀದಿ ಹಾಗೂ ಸ್ಮಶಾನ ನಿರ್ಮಾಣ ಮಾಡಲಿದ್ದು, ಒತ್ತುವರಿ ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ, ‘ನ್ಯಾಯದ ಹಿತದೃಷ್ಟಿಯಿಂದ’ ಅರ್ಜಿಯನ್ನು ವಾಪಸ್ ಪಡೆದುಕೊಳ್ಳಲು ಅನುಮತಿ ನೀಡಬೇಕು ಎಂದು ಅರ್ಜಿದಾರರ ಪರ ವಕೀಲರು ಜು.7ರಂದು ಮೆಮೋ ಸಲ್ಲಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠ ಅರ್ಜಿದಾರರ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಅರ್ಜಿ ವಾಪಸ್ ಪಡೆದುಕೊಳ್ಳುವ ನಿಮ್ಮ ಮನವಿ ಒಪ್ಪಲು ಸಾಧ್ಯವಿಲ್ಲ ಎಂದು ಅರ್ಜಿದಾರರಿಗೆ 25 ಸಾವಿರ ರೂ. ದಂಡ ವಿಧಿಸಿತು.