ಸಿನಿಮಾ

 ‘ಕ್ರೇಜಿ಼ Star ಕಿಡ್ನ್ಯಾಪ್!ಉದ್ದೇಶ ಏನು?’

ಕನ್ನಡ ಚಿತ್ರರಂಗದ ಹಿರಿಯ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅವರು ಇದೀಗ ಕಿರುತೆರೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇತ್ತೀಚೆಗೆ ಅವರ ಅಪಹರಣದ ವಿಡಿಯೋವೊಂದು ವೈರಲ್ ಆಗಿದೆ! ಅರೇ! ರವಿಚಂದ್ರನ್ ನಿಜವಾಗಿಯೂ ಕಿಡ್ನಾಪ್ ಆದರೇ? ಎಂದು ಯೋಚಿಸಬೇಡಿ. ಇದು ವಾಹಿನಿಯೊಂದರ ಪ್ರೋಮೋ. ಹೌದು. ಜೀ ಕನ್ನಡ ವಾಹಿನಿ ಕ್ರಿಯಾತ್ಮಕವಾಗಿ ಹೊಸ ಪ್ರೋಮೋ ತಯಾರಿಸಿದೆ. ಇದರಲ್ಲಿ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡುವುದನ್ನು ತೋರಿಸಲಾಗಿದೆ. ವೀಕ್ಷಕರಲ್ಲಿ ಕುತೂಹಲ ಉಳಿಸುವ ದೃಷ್ಟಿಯಿಂದ ಸಂಪೂರ್ಣ ಸಸ್ಪೆನ್ಸ್ ಅನ್ನು ವಾಹಿನಿ ಉಳಿಸಿಕೊಂಡಿದೆ. ವಿಡಿಯೋಗೆ ಕ್ಯಾಪ್ಶನ್ ನೀಡಿರುವ ವಾಹಿನಿ, ‘ಕ್ರೇಜಿ಼ Starನೇ ಕಿಡ್ನ್ಯಾಪ್! ಯಾರಿರಬಹುದು? ಯಾಕಿರಬಹುದು? ಉದ್ದೇಶ ಏನು?’ ಎಂದು ಬರೆದುಕೊಂಡಿದೆ. ಪ್ರೋಮೋ ಸದ್ಯ ವೈರಲ್ ಆಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಜೀ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ರವಿಚಂದ್ರನ್ ಕಿಡ್ನಾಪ್ ಪ್ರೋಮೋ ಇಲ್ಲಿದೆ:

ಪ್ರೇಕ್ಷಕರ ಊಹೆ ಏನು?

ರವಿಚಂದ್ರನ್ ಈ ಹಿಂದೆ ಡಾನ್ಸಿಂಗ್ ರಿಯಾಲಿಟಿ ಶೋ ಒಂದರ ಜಡ್ಜ್ ಆಗಿದ್ದರು. ಇದೀಗ ರವಿಚಂದ್ರನ್ ‘ಡ್ರಾಮಾ ಜ್ಯೂನಿಯರ್ಸ್​’ನ ಮುಂದಿನ ಸೀಸನ್​ಗೆ ನಿರ್ಣಾಯಕರಾಗಿ ರವಿಚಂದ್ರನ್ ಕಾಣಿಸಿಕೊಳ್ಳಲಿದ್ದಾರೆ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಪ್ರೋಮೋದಲ್ಲಿ ವಾಹಿನಿ ನೀಡಿರುವ ಸಣ್ಣ ಸುಳಿವನ್ನು ಉದಾಹರಿಸಿದ್ದಾರೆ. ಪ್ರೋಮೋದಲ್ಲಿ ರವಿಚಂದ್ರನ್ ಓಡಾಟದ ಕುರಿತು ಸಂವಹನ ನಡೆಸುತ್ತಿರುವುದು ಮಕ್ಕಳು. ಆದ್ದರಿಂದ ಮಕ್ಕಳೇ ಕಿಡ್ನಾಪ್ ಮಾಡಿದ್ದಾರೆ. ರಿಯಾಲಿಟಿ ಶೋಗೆ ಕರೆದೊಯ್ಯುವಂತೆ ಪ್ರೋಮೋ ಮೂಡಿಬರಬಹುದು. ಆದ್ದರಿಂದ ರವಿಚಂದ್ರನ್ ಡ್ರಾಮಾ ಜ್ಯೂನಿಯರ್ಸ್​​ನಲ್ಲಿ ಕಾಣಿಸಿಕೊಳ್ಳಬಹುದು ಎನ್ನುವುದು ಪ್ರೇಕ್ಷಕರ ವಾದ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿಯೇ ನಡೆಯುತ್ತಿದೆ.

ಆದರೆ ಪ್ರೋಮೋದಲ್ಲಿ ಇದಿನ್ನೂ ಮುಂದುವರೆಯುತ್ತದೆ ಎಂದು ವಾಹಿನಿ ಕುತೂಹಲ ಉಳಿಸಿಕೊಂಡಿದೆ. ಈ ಎಲ್ಲಾ ವಿಚಾರಗಳ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಲಭ್ಯವಾಗಲಿದೆ. ಚಿತ್ರಗಳ ವಿಷಯಕ್ಕೆ ಬಂದರೆ, ರವಿಚಂದ್ರನ್ ‘ದೃಶ್ಯ 2’ ಹಾಗೂ ‘ಕನ್ನಡಿಗ’ದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button