ಕ್ರಿಕೆಟ್ ಬೆಟ್ಟಿಂಗ್, ಆನ್ ಲೈನ್ ಗೇಮಿಂಗ್ ರಮ್ಮಿ ದಂಧೆ ನಿಷೇಧಿಸುವಂತೆ: ನಮ್ಮ ಕರ್ನಾಟಕ ಸೇನೆ ವತಿಯಿಂದ ಮನವಿ
ಮಾಲೂರು:
ಕ್ರಿಕೆಟ್ ಬೆಟ್ಟಿಂಗ್ ಆನ್ ಲೈನ್ ಗೇಮಿಂಗ್ ರಮ್ಮಿ ವೆಬೈಸೈಟ್ ಗಳಿಂದ ವಿದ್ಯಾರ್ಥಿಗಳು ಯುವಕರು ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಗಳು ಬೀದಿಗೆ ಬಂದು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದು, ಅಂತಹ ಬೆಟ್ಟಿಂಗ್ ದಂಧೆಯನ್ನು ಕಡಿವಾಣ ಹಾಕಬೇಕು ಎಂದು ನಮ್ಮ ಕರ್ನಾಟಕ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್ ಮತ್ತು ಜಿಲ್ಲಾಧ್ಯಕ್ಷ ಎಸ್.ಎಂ.ರಾಜು ನೇತೃತ್ವದಲ್ಲಿ ಬೆಟ್ಟಿಂಗ್ ದಂಧೆ ಮತ್ತು ಆನ್ ಲೈನ್ ಧಂದೆಗೆ ಕಡಿವಾಣ ಹಾಕಲು ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಮ್ಮ ಕರ್ನಾಟಕ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಕನಹಳ್ಳಿ ನಾಗರಾಜ್ ಮಾತನಾಡಿ, ರಾಜ್ಯದಲ್ಲಿ ಸುಮಾರು ವರ್ಷಗಳಿಂದ ರಾಜ್ಯದಲ್ಲಿ ಆನ್ ಲೈನ್ ಬೆಟ್ಟಿಂಗ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, ಯಾವುದೇ ಸರ್ಕಾರಗಳು ಇದುವರೆಗೂ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ.
ಯುವಕರು ಹಾಗೂ ವಿದ್ಯಾರ್ಥಿಗಳು ಬೆಟ್ಟಿಂಗ್ ದಂಧೆಯಲ್ಲಿ ಹಣ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಇತ್ತೀಚೆಗೆ ಅತಿ ಹೆಚ್ಚಾಗಿ ಕಂಡು ಬಂದಿದ್ದು ಲೈನ್ ಬೆಟ್ಟಿಂಗ್ ರಾಜ್ಯದಲ್ಲಿ ಕಡಿವಾಣ ಹಾಕಲು ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷರು ಬಸವರಾಜ್ ಪಡುಕೋಟೆ ರವರು ಧ್ವನಿ ಎತ್ತಿದ್ದಾರೆ. ಅಲ್ಲದೆ ಈಗಾಗಲೇ ಮೂರು ರಾಜ್ಯಗಳಲ್ಲಿ ಬೆಟ್ಟಿಂಗ್ ದಂಧೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಕರ್ನಾಟಕದಲ್ಲಿ ಸಹ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಆನ್ ಲೈನ್ ಮತ್ತು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಬುಕ್ಕಿಗಳ ಮೇಲೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವಂತ ಕೆಲಸ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಫ್ರೀಡಂಪಾರ್ಕ್ ನಲ್ಲಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್.ಎಂ.ರಾಜು, ಅಟೋ ಘಟಕ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ರೈತ ಘಟಕ ಜಿಲ್ಲಾಧ್ಯಕ್ಷ ಮಾದನಹಟ್ಟಿ ರವಿ, ಯುವ ಘಟಕ ಅಧ್ಯಕ್ಷ ಆಂಜಿಕನ್ನಡಿಗ, ಆಟೋ ಮಂಜು, ಗೌರವಾಧ್ಯಕ್ಷ ಡಿ.ಎನ್.ಗೋಪಾಲ್, ಕಾರ್ಯಾಧ್ಯಕ್ಷ ದ್ಯಾಪಸಂದ್ರ ಅಮರ್, ಪ್ರಧಾನ ಕಾರ್ಯದರ್ಶಿ ಕೆ.ಎನ್.ಜಗದೀಶ್, ಮಂಜುನಾಥ್ ಗೌಡ, ಮಂಜು ತೇಲಿ, ಚನ್ನಕೃಷ್ಣ, ಮುನಿರತ್ಮಮ್ಮ, ಪೈಲ್ವಾನ್ ಮಂಜು, ಮಂಗಾಪುರ ಸ್ವಾಮಿ, ಶ್ರೀನಾಥ್, ಇಂದಿರಾ ನಗರ ವೆಂಕಟೇಶ್, ಜ್ಯೋತಿಮ್ಮ, ಕೋಡೂರು ಮಂಜು, ದಸ್ತಗಿರಿ ಸೇರಿದಂತೆ ಹಲವಾರು ಕಾರ್ಯಕರ್ತರು ಹಾಜರಿದ್ದರು.