ಕ್ಯಾನ್ಸರ್ಗೆ ಮದ್ದು; ಮಂಗಳೂರು ವಿಜ್ಞಾನಿಗಳ ಸಂಶೋಧನೆಗೆ ಪೇಟೆಂಟ್
ಮಂಗಳೂರು, ಸೆಪ್ಟೆಂಬರ್ 24; ನಮ್ಮ ಪೂರ್ವಜರು ಪ್ರಕೃತಿಯನ್ನು ಉಸಿರಾಗಿಕೊಂಡವರು. ಪ್ರಕೃತಿಯನ್ನೇ ಬದುಕನ್ನಾಗಿಸಿದವರು. ಯಾವುದೇ ಆರೋಗ್ಯ ಸಮಸ್ಯೆಗೆ ಪ್ರಕೃತಿಯಲ್ಲೇ ಮದ್ದು ಹುಡುಕಿ ಅದಕ್ಕೆ ಪರಿಹಾರ ಕಂಡುಕೊಂಡವರು. ಆದರೆ ಕಾಲ ಕಳೆದಂತೆ ಪ್ರಕೃತಿ ನಾಶವಾಗಿ ಜೀವನ ಕ್ರಮವೇ ಬದಲಾಯಿತು. ಗಿಡಮೂಲಿಕೆಗಳ ಚಿಕಿತ್ಸಾ ಪದ್ಧತಿ ಮೂಢನಂಬಿಕೆ ಎಂಬ ಚರ್ಚೆಯಾಗುವ ಮಟ್ಟಿಗೆ ಬದಲಾಗಿಬಿಟ್ಟಿದ್ದೇವೆ.
ಆದರೆ ಹಿತ್ತಲಗಿಡವೇ ಮದ್ದು ಅಂತಾ ಮಂಗಳೂರಿನ ವಿಜ್ಞಾನಿಗಳು ಸಾಧಿಸಿ ತೋರಿಸಿದ್ದಾರೆ. ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ, ಕೃಷಿ ತೋಟಗಳಲ್ಲಿ ಸಿಗುವ ಹಡೇ ಬಳ್ಳಿಯೂ ಮಾರಕ ಕ್ಯಾನ್ಸರ್ ನಿವಾರಕ ಅನ್ನೋದನ್ನು ಮಂಗಳೂರಿನ ಸಸ್ಯ ವಿಜ್ಞಾನಿಗಳು ಸಾಬೀತು ಮಾಡಿದ್ದಾರೆ.
ಹಡೇ ಬಳ್ಳಿಯನ್ನು ಸಂಶೋಧನೆ ಮಾಡಿ, ಅದನ್ನು ಶುದ್ಧೀಕರಣ ಮಾಡಿ ಕ್ಯಾನ್ಸರ್ಗೆ ರಾಮಬಾಣವಾಗುವ ಅಂಶವನ್ನು ಮಂಗಳೂರಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಅಂಶಕ್ಕೆ ಭಾರತ ಸರ್ಕಾರದಿಂದ ಪೇಟೆಂಟ್ ಸಹ ಪಡೆದಿದ್ದಾರೆ. ಹಡೇ ಬಳ್ಳಿಯ ಮೇಲೆ ನಡೆದ ದೇಶದ ಮೊದಲ ಸಂಶೋಧನೆ ಇದಾಗಿದ್ದು, ಭಾರತದ ಮೊದಲ ಪೇಟೆಂಟ್ ಕೂಡಾ ಇದಾಗಿದೆ.
ಮಂಗಳೂರು ವಿಶ್ವ ವಿದ್ಯಾನಿಲಯದ ಸಸ್ಯ ಶಾಸ್ತ್ರ ಸಂಶೋಧಕರಾದ ಪ್ರೊ. ಕೆ. ಆರ್ ಚಂದ್ರಶೇಖರ್ ಮತ್ತು ಪ್ರೊ. ಭಾಗ್ಯ ನಕ್ರೆಕಲಾಯ ಹಡೇ ಬಳ್ಳಿಯನ್ನು ಸಂಶೋಧನೆ ಮಾಡಿದ್ದಾರೆ. ಸದ್ಯ ಈ ಇಬ್ಬರೂ ವಿಜ್ಞಾನಿಗಳು ಮಂಗಳೂರು ವಿಶ್ವ ವಿದ್ಯಾನಿಲಯದಿಂದ ನಿವೃತಿಯಾಗಿದ್ದಾರೆ. ಮಂಗಳೂರು ಖಾಸಗಿ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2017ರಲ್ಲಿ ಸಂಶೋಧನೆ ನಡೆಸಿ ಪೇಟೆಂಟ್ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಸುದೀರ್ಘ ಸಮಯದ ಬಳಿಕ ಇವರ ಸಂಶೋಧನೆಗೆ ಪೇಟೆಂಟ್ ಲಭ್ಯವಾಗಿದೆ. 20 ವರ್ಷಗಳ ಅವಧಿಗೆ ಪೇಟೆಂಟ್ ಲಭ್ಯವಾಗಿದ್ದು, ಈ ಸಂಶೋಧನಾ ಅಂಶ ಬಳಸಿ ಔಷಧ ತಯಾರು ಮಾಡಬಹುದಾಗಿದೆ.
ಹಡೇ ಬಳ್ಳಿಯ ಅಂಗಾಂಗ ಕಸಿ ಮಾಡಿದ ಬಳಿಕ ರಾಸಾಯನಿಕ ಅಂಶ ಪತ್ತೆ ಮಾಡುವ ಸಂದರ್ಭದಲ್ಲಿ ಕ್ಯಾನ್ಸರ್ಗೆ ಮಾರಕವಾಗಬಲ್ಲ ಟೆಂಟ್ರಾಡ್ರೈನ್ ಅಂಶ ಪತ್ತೆಯಾಗಿದೆ. ಭಾರತದಲ್ಲಿ ಈವರೆಗೆ ಯಾರೂ ಈ ವಿಚಾರದಲ್ಲಿ ಸಂಶೋಧನೆ ಮಾಡಿಲ್ಲ .ಹಾಗಾಗಿ ಇದು ಭಾರತದ ಮೊದಲ ಸಂಶೋಧನೆ ಎಂಬ ಗಿರಿಮೆಗೆ ಪಾತ್ರವಾಗಿದೆ.