ಕೋವಿಡ್ ಸಾವು: ಕುಟುಂಬಗಳಿಗೆ ಒಂದು ಲಕ್ಷ ಪರಿಹಾರ ವಿತರಣೆ
ಬೆಂಗಳೂರು, ಸೆ: ಕೋವಿಡ್19 ನಿಂದ ಮೃತಪಟ್ಟ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ಒಂದು ಲಕ್ಷದ ಚೆಕ್ ವಿತರಣೆ ಮಾಡಿದೆ. ಕಂದಾಯ ಸಚಿವ ಆರ್.ಅಶೋಕ್ ಅವರು ಗುರುವಾರ ವಿಧಾನಸೌಧದಲ್ಲಿ ಸಾಂಕೇತಿಕವಾಗಿ 18 ಕುಟುಂಬಗಳಿಗೆ ಚೆಕ್ ವಿತರಣೆ ಮಾಡಿದರು.
ಕೋವಿಡ್ ಸಾಂಕ್ರಾಮಿಕ ಹರಡಿದ ನಂತರ 2020 ಮತ್ತು ಈ ವರ್ಷ ಅನೇಕರನ್ನು ಬಲಿ ಪಡೆದಿದೆ. ಕುಟುಂಬಕ್ಕೆ ಆಧಾರ ಆಗಿದ್ದವರನ್ನು ಕಳೆದುಕೊಂಡು ಕುಟುಂಬಸ್ಥರು ತೊಂದರೆ ಪಡುತ್ತಿದ್ದಾರೆ. ಇಂತಹವರಿಗೆ ರಾಜ್ಯ ಸರ್ಕಾರ ನೆರವಿಗೆ ಬಂದಿದ್ದು, ಮೃತಪಟ್ಟಂತಹ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಒಂದು ಲಕ್ಷ ಪರಿಹಾರವಾಗಿ ನೀಡಿದೆ.
ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ತಲಾ 50,000 ಪರಿಹಾರ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿತ್ತು. ರಾಜ್ಯ ಸರ್ಕಾರಗಳು ವಿಪತ್ತು ನಿರ್ವಹಣಾ ನಿಧಿಯಿಂದ ಈ ಹಣ ಒದಗಿಸಲಿವೆ. ಕರೋನಾಕ್ಕೆ ಸಂಬಂಧಸಿದಂತೆ 40,000ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.
ಚೆಕ್ ವಿತರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಅಶೋಕ್, “ಕೋವಿಡ್ ಕಾರಣದಿಂದಾಗಿ ಅನೇಕ ಕುಟುಂಬಗಳಲ್ಲಿ ಸಾವು ಸಂಭವಿಸಿದೆ. ಕೆಲವರು ತಂದೆ, ತಾಯಿಯನ್ನು ಕಳೆದುಕೊಂಡಿದ್ದಾರೆ, ಮಕ್ಕಳು ಅನಾಥ ಆಗಿವೆ, ವಯಸ್ಕರು ಮೃತಪಟ್ಟಿದ್ದರಿಂದ ವೃದ್ಧರು ಆಸರೆ ಕಳೆದುಕೊಂಡಿದ್ದಾರೆ. ಇಂತಹ ಕುಟುಂಬಗಳಿಗೆ ರಾಜ್ಯ ಸರ್ಕಾರ ನೆರವು ನೀಡುತ್ತಿದೆ” ಎಂದು ಹೇಳಿದರು.
ಪರಿಹಾರಕ್ಕಾಗಿ ರಾಜ್ಯದಾದ್ಯಂತ 7,729 ಅರ್ಜಿಗಳು ಬಂದಿವೆ. ಇಂದು ಸಾಂಕೇತಿಕವಾಗಿ ಕೆಲವರಿಗೆ ಮಾತ್ರ ಚೆಕ್‌ಗಳನ್ನು ವಿತರಣೆ ಮಾಡಿದ್ದೇವೆ. ಉಳಿದಂತೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ವಿತರಣೆ ಮಾಡಲಿದ್ದಾರೆ. ಪರಿಹಾರಕ್ಕಾಗಿ ಆಯ್ಕೆಯಾದ ಫಲಾನುಭವಿಗಳು ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ಚೆಕ್ ಪಡೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದರು.
ಸುಪ್ರೀಂಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರವೂ ಸಹ 50,000 ಪರಿಹಾರ ಘೋಷಣೆ ಮಾಡಿದೆ. ಆದರೆ, ಆ ಹಣ ಇನ್ನೂ ಬಿಡುಗಡೆಯಾಗಿಲ್ಲ. ಯಾವ ರೀತಿಯಲ್ಲಿ ಹಣ ಕೊಡಬೇಕು ಎಂದು ಕೇಂದ್ರ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ಬಂದ ಬಳಿಕ ಆ ಹಣವನ್ನೂ ಸಹ ಫಲಾನುಭವಿಗಳಿಗೆ ತಲುಪಿಸುತ್ತೇವೆ ಎಂದು ಆಶೋಕ್ ಹೇಳಿದರು.
ಕೋವಿಡ್ ಮೃತ ಕುಟುಂಬಗಳ ವರದಿಗೆ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಲ್ಲಿ ಯಾರಾದರೂ ಕೋವಿಡ್ ಕಾರಣದಿಂದ ಮೃತಪಟ್ಟಿದ್ದರೆ ಅಂತಹವರು ನಾಡ ಕಚೇರಿಗಳಿಗೆ ತೆರಳಿ ಅಗತ್ಯ ಮಾಹಿತಿಗಳನ್ನು ಒದಗಿಸುವ ಮೂಲಕ ಅರ್ಜಿಗಳನ್ನು ತುಂಬಿ ಕಳುಹಿಸಬೇಕು. ಪರಿಶೀಲನೆ ನಡೆಸಿ ಪರಿಹಾರ ಒದಗಿಸಲಾಗುವುದು ಎಂದು ಅಶೋಕ್ ವಿವರಿಸಿದರು.