ಇತ್ತೀಚಿನ ಸುದ್ದಿರಾಜ್ಯಸುದ್ದಿ

ಕೋಲಾರ- ವಿಜಯಪುರದಲ್ಲಿ ಅನ್ನಭಾಗ್ಯ ಅಕ್ಕಿ ಕಾಳ ದಂಧೆ ಬಯಲಿಗೆಳೆದ ಕರ್ನಾಟಕ ರಾಷ್ಟ್ರ ಸಮಿತಿ 

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗೆ ಇರುವವರ ಹಸಿವು ನೀಗಬೇಕಿದ್ದ ಅನ್ನ ಭಾಗ್ಯ ಪಡಿತರ ಅಕ್ಕಿ ರೈಸ್ ಮಿಲ್‌ಗಳು ಸೇರಿ ಕಾಳ ಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ವರ್ಷಗಳಿಂದಲೂ ಎಗ್ಗಿಲ್ಲದೇ ನಡೆಯುತ್ತಿರುವ ಅನ್ನಭಾಗ್ಯ ಕಾಳದಂಧೆಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರು ಏಕ ಕಾಲದಲ್ಲಿ ಎರಡು ಜಿಲ್ಲೆಯಲ್ಲಿ ಬಯಲಿಗೆ ಎಳೆದಿದ್ದಾರೆ.

ಬೆಂಗಳೂರಿನಿಂದ ಅಕ್ರಮವಾಗಿ ಕೋಲಾರ ಜಿಲ್ಲೆಯ ಬಂಗಾರಪೇಟೆ ರೈಸ್ ಮಿಲ್‌ಗಳಿಗೆ ಹೋಗುತ್ತಿದ್ದ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನಗಳನ್ನು ಕೋಲಾರ ಜಿಲ್ಲೆ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ತಡೆದು ಸಾರ್ವಜನಿಕರಗೊಳಿಸಿದ್ದಾರೆ. ಬೆಂಗಳೂರಿನ ಕೆ.ಆರ್‌. ಪುರ, ರಾಮಮೂರ್ತಿನಗರ ಮತ್ತಿತರ ಕಡೆಯಿಂದ ಬಂಗಾರಪೇಟೆಯಲ್ಲಿರುವ ರೈಸ್‌ಮಿಲ್‌ಗಳಿಗೆ ಸಾಗಣೆ ಮಾಡಲಾಗುತ್ತದೆ. ಅಲ್ಲಿ ಪಾಲಿಶ್ ಮಾಡಿ ಅದೇ ಅಕ್ಕಿಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುವ ದೊಡ್ಡ ದಂಧೆ ಹಲವು ವರ್ಷಗಳಿಂದ ಎಗ್ಗಿಲ್ಲದೇ ನಡೆಯುತ್ತಿತ್ತು. ವರ್ಷದ ಹಿಂದೆ ಪಡಿತರ ಅಕ್ಕಿ ಕಾಳ ದಂಧೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳೇ ಬಯಲು ಮಾಡಿದ್ದರು.

ಕೇಸು ಕೂಡ ದಾಖಲಾಗಿತ್ತು. ಇದಾದ ಕೆಲ ದಿನಗಳ ನಂತರ ಮತ್ತೆ ಈ ದಂಧೆ ಹುಟ್ಟಿಕೊಂಡಿದೆ. ಲೋಡು ಗಟ್ಟಲೇ ಅಕ್ಕಿಯನ್ನು ಬಂಗಾರಪೇಟೆ ರೈಸ್ ಮಿಲ್ ಗಳಿಗೆ ಸಾಗಿಸಿ ಅಲ್ಲಿಂದ ಮುಕ್ತ ಮಾರುಕಟ್ಟೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ವಾಹನಗಳಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವಾಹನವನ್ನು ತಡೆದಿರುವ ಕೋಲಾರ ಜಿಲ್ಲೆ ಕೆಆರ್‌ಎಸ್ ಪಕ್ಷದ ಕಾಯಕರ್ತರು ಸರ್ಕಾರದ ಗಮನ ಸೆಳೆದಿದ್ದಾರೆ. ಜಿಲ್ಲೆಯ ಅಧ್ಯಕ್ಷೆ ಇಂದಿರಾರೆಡ್ಡಿ ಅವರ ನೇತೃತ್ವದಲ್ಲಿ ಕೆಆರ್ಎಸ್ ಕಾರ್ಯಕರ್ತರು ಟೆಂಪೋ ತಡೆ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

ವಿಜಯಪುರದಲ್ಲೂ ಅನ್ನಭಾಗ್ಯ ಅಕ್ಕಿಗೆ ಕನ್ನ:

ವಿಜಯಪುರ ಜಿಲ್ಲೆಯಲ್ಲಿ ಸಹ ಪಡಿತರ ಅಕ್ಕಿಯನ್ನು ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುವುದನ್ನು ವಿಜಯಪುರ ಜಿಲ್ಲೆ ಕೆಆರ್‌ಎಸ್ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ. ಕಾಳ ಸಂತೆಗೆ ಟೆಂಪೋದಲ್ಲಿ ತೆಗೆದುಕೊಂಡು ಹೋಗುತ್ತಿದ್ದನ್ನು ಹಿಂಬಾಲಿಸಿ ವಾಹನ ತಡೆದು ಅದರ ಚಾಲಕನನ್ನು ಪ್ರಶ್ನಿಸಿದ್ದಾರೆ. ವಾಹನಗಳಲ್ಲಿರುವ ಅಕ್ಕಿ ಪಡಿತರ ಅಕ್ಕಿ ಎಂಬುದು ದೃಢಪಟ್ಟಿದ್ದು, ಸಂಬಂಧ ಪಟ್ಟ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಪೊಲೀಸರ ಭ್ರಷ್ಟಾಚಾರವನ್ನು ಸಾರ್ವಜನಿಕ ದರ್ಶನ ಮಾಡಿಸುವ ಮೂಲಕ ರಾಜ್ಯದಲ್ಲಿ ಕೆಆರ್ಎಸ್ ಪಕ್ಷ ಸದ್ದು ಮಾಡುತ್ತಿತ್ತು. ರವಿಕೃಷ್ಣಾರೆಡ್ಡಿ ನೇತೃತ್ವದಲ್ಲಿ ಪ್ರತಿ ದಿನ ಒಂದಲ್ಲಾ ಒಂದು ಕರ್ಮಕಾಂಡವನ್ನು ಬಯಲಿಗೆ ಎಳೆಯುವ ಮೂಲಕ ಸಾರ್ವಜನಿಕ ಚರ್ಚೆಗೆ ಗ್ರಾಸ ಒದಗಿಸಿದ್ದಾರೆ. ಪೊಲೀಸರ ಭ್ರಷ್ಟಾಚಾರದ ಜತೆಗೆ ಇದೀಗ ಬಡವರ ಹಸಿವು ನೀಗಬೇಕಿದ್ದ ಪಡಿತರ ಅಕ್ಕಿಯ ಕಾಳ ದಂಧೆಯನ್ನು ಕೂಡ ಬಯಲಿಗೆ ಎಳೆಯುವ ಮೂಲಕ ಸಾರ್ವಜನಿಕ ವಲಯದಲ್ಲಿ ಕೆಆರ್ಎಸ್ ಪಕ್ಷದ ಕಾರ್ಯಕರ್ತರು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಸರ್ಕಾರಿ ವ್ಯವಸ್ಥೆಯ ಭ್ರಷ್ಟಾಚಾರ ಅನಾವರಣಗೊಳಿಸುತ್ತಿರುವ ಕೆಆರ್ಎಸ್ ಕಾರ್ಯಗಳಿಗೆ ಸಾರ್ವಜನಿಕರು ದೊಡ್ಡ ಮಟ್ಟದಲ್ಲಿ ಬೆಂಬಲ ಸೂಚಿಸಿ ಅಭಿನಂದಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button