ಟಿ-20 ವಿಶ್ವಕಪ್ (T20 World Cup) ನಂತರ ಭಾರತದ ಕೋಚ್ ಯಾರಾಗಲಿದ್ದಾರೆ? ಎಂಬ ಕುರಿತು ಅನೇಕ ಊಹಾಪೋಹಗಳು ಮನೆ ಮಾಡಿದ್ದವು. ಆದರೆ, ರಾಹುಲ್ ದ್ರಾವಿಡ್ (Rahul Dravid) ಭಾರತ ತಂಡದ ಹಂಗಾಮಿ ಕೋಚ್ (Indian Cricket Team Coach) ಆಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದೀಗ ತಿಳಿದುಬಂದಿರುವ ಅನೇಕ ಕುತೂಹಲಕಾರಿ ವರದಿಗಳ ಮಾಹಿತಿಯ ಪ್ರಕಾರ ವಿಶ್ವಕಪ್ ನಂತರ ಮಾಜಿ ನಾಯಕ ರಾಹುಲ್ ದ್ರಾವಿಡ್ ಭಾರತ ಪುರುಷ ತಂಡಕ್ಕೆ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಆಗಿ ನೇಮಕವಾಗಲಿದ್ದಾರೆ.
ಈ ಬಗೆಗಿನ ಬಿಸಿಸಿಐ (BCCI) ಕೋರಿಕೆಗೆ ದ್ರಾವಿಡ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ಅನೇಕ ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಅಂಡರ್ 19 ರಾಷ್ಟ್ರೀಯ (Under-19 Team) ತಂಡದ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಮತ್ತೊಂದು ಹೊಸ ಇನ್ನಿಂಗ್ಸ್ ಆರಂಭವಾಗುವುದು ಖಚಿತವಾದಂತಾಗಿದೆ.
ಈ ವರ್ಷದ ಟಿ-20 ವಿಶ್ವಕಪ್ನೊಂದಿಗೆ ಪ್ರಸ್ತುತ ಕೋಚ್ ಆಗಿರುವ ರವಿಶಾಸ್ತ್ರಿ ಅವರ ಒಪ್ಪಂದ ಅಂತ್ಯವಾಗಲಿದೆ. ಹೀಗಾಗಿ ಅವರ ಸ್ಥಾನಕ್ಕೆ ಹೊಸ ಕೋಚ್ ನೇಮಕ ಮಾಡಬೇಕಿರುವ ಅನಿವಾರ್ಯತೆ ಬಿಸಿಸಿಐ ಎದುರಿದೆ. ಹೀಗಾಗಿ ಈ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅವರೇ ಸೂಕ್ತ ಎಂಬುದು ಬಿಸಿಸಿಐ ನಿರ್ಧಾರ. ಆದರೆ, ಇಷ್ಟು ದಿನ ಹಿರಿಯ ಪುರುಷ ತಂಡಕ್ಕೆ ಕೋಚ್ ಆಗಲು ಒಪ್ಪದ ರಾಹುಲ್ ದ್ರಾವಿಡ್ ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.