
ಕೊಡಗಿನಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರಿಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದ್ದಾರೆ.ಅಕ್ರಮ ಬಾಂಗ್ಲಾ ವಲಸಿಗರ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ ಆತಂಕದ ಬಗ್ಗೆ ಗೃಹ ಸಚಿವರಿಗೆ ತಿಳಿಸಲಾಯಿತು. ಈ ವಿಷಯದ ಕುರಿತು ಗೃಹ ಸಚಿವಾಲಯದಿಂದ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.ಎಲ್ಲ ವಿಷಯಗಳನ್ನು ಕೂಲಂಕಷವಾಗಿ ಆಲಿಸಿದ ಗೃಹ ಸಚಿವ ಅಮಿತ್ ಶಾ, ಕಾಲಮಿತಿಯಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದಿದ್ದಾರೆ. ಕೊಡಗಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಆಸ್ತಿಪಾಸ್ತಿ ನಷ್ಟವಾಗಿದೆ. ಇವುಗಳಿಗೆ ಎನ್‌ಡಿಆರ್‌ಎಫ್ ಮೂಲಕ ಪರಿಹಾರ ಒದಗಿಸಲು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಲಾಯಿತು ಎಂದು ಒಡೆಯರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಾಗಿದ್ದು, ಇವರುಗಳು ರಾಜ್ಯದ ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕಿನಲ್ಲೂ ಹರಡಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.ಪತ್ರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಲ್ಲದೇ, ನಮ್ಮ ಧಾರ್ಮಿಕ ನಂಬಿಕೆಗಳಿಗೂ ಸಹ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ. ಅಲ್ಲದೇ ಇತ್ತೀಚಿಗೆ ಚಿಕ್ಕಮಂಗಳೂರಿನಲ್ಲಿ ಆಕಳು ಕೆಚ್ಚಲನ್ನು ಕೊಯ್ದು, ಹಸುವಿನ ಮಾಂಸವನ್ನು ಕತ್ತರಿಸಿದ್ದು, ಕಳೆದ ವಾರದ ಪತ್ರಿಕೆಗಳಲ್ಲಿ ವರದಿಯಾಗಿರುತ್ತವೆ. ಅಕ್ರಮ ಬಾಂಗ್ಲಾ ವಲಸಿಗರು ಭಾರತದ ಮೇಘಾಲಯ, ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ ರಾಜ್ಯಗಳಲ್ಲಿ ವಾಸ ಮಾಡುತ್ತೇವೆ ಎಂದು ಆಧಾರ್ ಕಾರ್ಡ್ ಗಳನ್ನು ಪಡೆದಿದ್ದಾರೆ. ಆದರೆ ಇವರುಗಳು ಕರ್ನಾಟಕ ಮತ್ತು ದೇಶದ ಅನೇಕ ರಾಜ್ಯಗಳಲ್ಲೂ ಸಹ ನೆಲೆಸಿದ್ದು, ಅನೇಕ ಕಡೆ ಡಕಾಯಿತಿ, ಕಳ್ಳತನ, ಅತ್ಯಾಚಾರ ಪ್ರಕರಣಗಳಲ್ಲೂ ಭಾಗಿಯಾಗಿರುವುದರ ಬಗ್ಗೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿರುತ್ತಾರೆ. ಇವರ ಈ ಅಕ್ರಮಗಳನ್ನು ತಡೆಗಟ್ಟಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಒಂದು ಅಭಿಯಾನ ಮಾಡಿ, ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಿ, ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಬೇಕು. ಯಾರು ಬಾಂಗ್ಲಾ ಭಾಷೆಯಲ್ಲಿ ಮಾತನಾಡುತ್ತಾರೋ ಮತ್ತು ಯಾರ ಬಳಿ ಅಸ್ಸಾಂ, ಬಿಹಾರ್, ಮೇಘಾಲಯ, ಪಶ್ಚಿಮ ಬಂಗಾಳ ರಾಜ್ಯದ ಆಧಾರ್ ಕಾರ್ಡ್ ಇದೆಯೋ ಅಂತವರು ತಮ್ಮ ಮೊಬೈಲ್ ಮೂಲಕ ಬಾಂಗ್ಲಾ ದೇಶದವರ ನೆಂಟರಿಷ್ಟರ ಬಳಿ ಮಾತನಾಡುತ್ತಿರುತ್ತಾರೆ ಹಾಗೂ ಇವರು ಬ್ಯಾಂಕ್ ಮತ್ತು ಮೊಬೈಲ್ ಮೂಲಕ ತಮ್ಮ ಬಾಂಗ್ಲಾದೇಶದಲ್ಲಿ ನೆಲೆಸಿರುವ ಬಂಧು ಬಳಗದವರಿಗೆ ಹಣವನ್ನು ಕಳುಹಿಸುತ್ತಿರುತ್ತಾರೆ. ಇದನ್ನು ಮೊಬೈಲ್ ಟ್ರ್ಯಾಕಿಂಗ್ ಮೂಲಕ ಪತ್ತೆ ಹಚ್ಚಿ, ಇಂತಹವರನ್ನು ಗುರುತಿಸಿ ಭಾರತ ದೇಶದಿಂದ ಹೊರಗಟ್ಟುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.ಈ ವಿಷಯವಾಗಿ ರಾಜ್ಯದ ಜನತೆ ಹೋರಾಟ ಮಾಡುವ ಮುನ್ನವೇ ತಾವು ರಾಜ್ಯದಲ್ಲಿ ಅಕ್ರಮವಾಗಿ ವಾಸವಾಗಿರುವ ಬಾಂಗ್ಲಾದವರನ್ನು ರಾಜ್ಯದಿಂದ ಮತ್ತು ದೇಶದಿಂದ ಹೊರಹಾಕುವ ಕಾರ್ಯಕೈಗೊಂಡು ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಮೂಲಕ ಭಾರತದ ಅಖಂಡತೆ ಮತ್ತು ಸುರಕ್ಷತೆಯನ್ನು ಕಾಪಾಡುವಂತೆ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.


