ಕೆಪಿಸಿಸಿ ಅಧ್ಯಕ್ಷರು ಸ್ವಾಗತ ಮಾಡುವ ಮೊದಲೇ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ….
ಭಾರತ್ ಜೋಡೋ ಯಾತ್ರೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮಧ್ಯೆ ಮುಸುಕಿನ ಗುದ್ದಾಟ ಮತ್ತೆ ಬಹಿರಂಗವಾಗಿದೆ. ರಾಹುಲ್ ಗಾಂಧಿ ಎದುರೇ ಒಬ್ಬರಿಗೊಬ್ಬರು ಠಕ್ಕರ್ ನೀಡಿದ್ದಾರೆ. ಸ್ವಾಗತದ ಕಾರ್ಯಕ್ರಮದಲ್ಲೇ ಡಿಕೆ ಶಿವಕುಮಾರ್ ಯಾಮಾರಿದ್ದು ಕರ್ನಾಟಕ ಗಡಿಯಲ್ಲೇ ಸಿದ್ದರಾಮಯ್ಯ ಟಿಂ ರಾಹುಲ್ ಗಾಂಧಿ ಅವರನ್ನು ಸ್ವಾಗತಿಸಿದೆ. ಡಿಕೆಶಿ, ಸಿದ್ದು ಮಧ್ಯೆ ನಡೆಯುತ್ತಿರುವ ಗುದ್ದಾಟವನ್ನು ಅರಿತ ರಾಹುಲ್ ಗಾಂಧಿ ವೇದಿಕೆಯಲ್ಲೇ ಇಬ್ಬರ ಕೈ ಹಿಡಿದು ಡೋಲು ಬಾರಿಸಿದ್ದಾರೆ. ರಾಹುಲ್ ಗಾಂಧಿ ಅವರನ್ನು ಸ್ವಾಗತಿಸುವ ವಿಚಾರದಲ್ಲಿ ರಾಜ್ಯ ಕೈ ನಾಯಕರಲ್ಲಿ ಗೊಂದಲ ಇದ್ದ ವಿಚಾರ ಬಹಿರಂಗವಾಗಿದೆ. ಇಂದು ಬೆಳಗ್ಗೆ ರಾಹುಲ್ ಗಾಂಧಿ ಅವರನ್ನು ಗುಂಡ್ಲುಪೇಟೆಯಲ್ಲಿ ನಿರ್ಮಿಸಲಾಗಿರುವ ವೇದಿಕೆ ಬಳಿಯೇ ಸ್ವಾಗತಿಸಲು ಡಿಕೆ ಶಿವಕುಮಾರ್, ಇತರ ನಾಯಕರು ಕಾದಿದ್ದರು. ಆದರೆ ಸಿದ್ದರಾಮಯ್ಯ ಟೀಂ ರಾಹುಲ್ ಗಾಂಧಿ ಅವರನ್ನು ಕಾಡಿನ ಮಧ್ಯೆ ಸ್ವಾಗತಿಸಿದೆ. ಏಕಾಂಗಿಯಾಗಿ ಕರ್ನಾಟಕ ಪ್ರವೇಶ ಮಾಡಿದ್ದ ರಾಹುಲ್ ಗಾಂಧಿ ಅವರನ್ನು ಕೆಕ್ಕನಹಳ್ಳ ಚೆಕ್ ಪೋಸ್ಟ್‌ನಲ್ಲಿ ಬರ ಮಾಡಿಕೊಳ್ಳಲು ಯಾರು ತೆರಳಿರಲಿಲ್ಲ. ಚೆಕ್ ಪೋಸ್ಟ್‌ನಿಂದ ಗುಂಡ್ಲುಪೇಟೆಗೆ ಬರುವಾಗ ಮಾರ್ಗಮಧ್ಯೆ ಸಿದ್ದು ಅಂಡ್ ಟೀಂ ಸ್ವಾಗತ ನೀಡಿದೆ. ಮಾರ್ಗ ಮಧ್ಯೆ ಹೂಗುಚ್ಛ ನೀಡಿ ಸಿದ್ದರಾಮಯ್ಯ ಕರ್ನಾಟಕಕ್ಕೆ ಬರಮಾಡಿಕೊಂಡರು. ಕೆಪಿಸಿಸಿ ಅಧ್ಯಕ್ಷರು ಸ್ವಾಗತ ಮಾಡುವ ಮೊದಲೇ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಇದಾದ ಬಳಿಕ ಗುಂಡ್ಲುಪೇಟೆ ಅಂಬೇಡ್ಕರ್ ಭವನದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ದೂರ ನಿಂತಿದ್ದರು. ಒಂದು ಬಾರಿ ಮೂವರು ನಾಯಕರು ಡೋಲು ಬಾರಿಸಿದ ಬಳಿಕ ರಾಹುಲ್ ಗಾಂಧಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೈಯನ್ನು ಹಿಡಿದು ಡೋಲು ಬಾರಿಸಿ ಭಿನ್ನಾಭಿಪ್ರಾಯ ಶಮನ ಮಾಡಲು ಪ್ರಯತ್ನಿಸಿದರು.