ಕೆಎಂಎಫ್’ಗೆ ಗೋಶಾಲೆ ನಿರ್ವಹಣೆ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರ!
ಬೆಂಗಳೂರು: ರಾಜ್ಯದ ಪ್ರತೀ ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಗೋಶಾಲೆಗಳನ್ನು ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ ನಿಯಮಿತ (ಕೆಎಂಎಫ್) ನಿರ್ವಹಣೆ ಮಾಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಲ ವತಿಯಿಂದ ಆಯೋಜಿಸಿರುವ ಕರ್ನಾಟಕ ಹಾಲು ಮಹಾಮಂಡಳದ ಸಾಮೂಹಿಕ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ತೆರೆಯಲಾಗುವುದು. ಆರಂಭಕ್ಕೆ ಬೇಕಾದ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗುತ್ತದೆ. ನಿರ್ವಹಣೆಯನ್ನು ಪಶುಸಂಗೋಪನೆ ಇಲಾಖೆ ನೋಡಿಕೊಳ್ಳಬೇಕು ಎಂದು ಹೇಳಿದರು.
ನೋ ಪ್ರಾಪಿಟ್, ನೋ ಲಾಸ್ ರೀತಿ ಕಾರ್ಯ ನಿರ್ವಹಿಸಬೇಕು. ಗೋಶಾಲೆ ಪುಣ್ಯದ ಕೆಲಸ ಅದನ್ನು ನಾವೆಲ್ಲ ಸೇರಿ ಮಾಡಬೇಕು. ಯಾವ ಜಿಲ್ಲೆಯಲ್ಲಿ ನೀರಾವರಿ, ಹಸಿರು ಇದೆ ಅಲ್ಲಿ ಗೋವುಗಳನ್ನು ಹೆಚ್ಚು ರೈತರಿಗೆ ನೀಡಲಾಗುವುದು. ಕೇಂದ್ರ ಹಾಗು ರಾಜ್ಯ ಸರ್ಕಾರ ಹೊಸ ಯೋಜನೆಗಳನ್ನು ಮುಂದೆ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಹಾಲಿನ ದರ ಹೆಚ್ಚಳ ಮಾಡುವ ವಿಚಾರವಾಗಿ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಈ ಕುರಿತು ನಾನು ಯಾವುದೇ ಆಶ್ವಾಸನೆ ಕೊಡುವುದಿಲ್ಲ. ಕೊಡಲು ಬರುವುದಿಲ್ಲ. ನಾಯಕರಾದ ಯಡಿಯೂರಪ್ಪ ಪ್ರೋತ್ಸಾಹ ಧನ ನೀಡಿದ್ದರು. ಕೋವಿಡ್ ಸಂದರ್ಭದಲ್ಲಿ 1250 ಕೋಟಿ ಸಹಾಯ ಮಾಡಲಾಗಿದೆ. ಇದಕ್ಕೆ ಬಿಎಸ್ ವೈ ಗೆ ಅಭಾರಿಯಾಗಿದ್ದೇನೆ. ಬಿಎಸ್ ವೈ ಅವರ ಯೋಜನೆ ಮುಂದುವರೆಸಲಾಗುವುದು. ಕೆಎಂಎಫ್ ಗೆ ಈ ವರ್ಷ 50 ಕೋಟಿ ಪ್ರೋತ್ಸಾಹ ಧನ ನೀಡಲಾಗುವುದು ಎಂದರು.