ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಸಲುವಾಗಿ ನ.8ಕ್ಕೆ ಎಲ್ಲೆಡೆಯಿಂದ ಬರಲಿದೆ ಪವಿತ್ರ ಮೃತ್ತಿಕೆ
ಬೆಂಗಳೂರು: ನಾಡಪ್ರಭು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ನಿರ್ಮಾಣವಾಗುತ್ತಿರುವ 108 ಅಡಿ ಎತ್ತರದ ಕಂಚಿನ ಪ್ರತಿಮೆ ʼಪ್ರಗತಿಯ ಪ್ರತಿಮೆʼ ಉದ್ಘಾಟನೆಗೂ ಮುನ್ನ ರಾಜ್ಯದ ಎಲ್ಲ ಹಳ್ಳಿಗಳಿಂದ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ನಡೆಯುತ್ತಿದ್ದು, ನವೆಂಬರ್ 8ರ ವೇಳೆಗೆ ಎಲ್ಲ ಕಡೆಯಿಂದ ಬೆಂಗಳೂರಿಗೆ ರಥಗಳು ಆಗಮಿಸಲಿವೆ.
ಈ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿಸಿ ಸಿಇಒಗಳ ಜತೆಗೆ ಐಟಿಬಿಟಿ ಸಚಿವ ಹಾಗೂ ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ. ಸಿ.ಎನ್. ಅಶ್ವತ್ಥನಾರಾಯಣ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿ ಸೂಚನೆ ನೀಡಿದರು.
ನವೆಂಬರ್ 11ರಂದು ನಡೆಯಲಿರುವ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮಕ್ಕೆ ಪೂರಕವಾಗಿ ರಾಜ್ಯಮಟ್ಟದ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ನಡೆಯುತ್ತಿದೆ.
ಅಭಿಯಾನದ ಅಂಗವಾಗಿ ಚಾಲನೆ ಪಡೆದಿರುವ ವಿಶೇಷ ರಥಗಳು ಈಗಾಗಲೇ ಜಿಲ್ಲೆಗಳನ್ನು ತಲುಪಿವೆ. ಹಾಸನ, ಮಂಡ್ಯ, ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮಾತ್ರ ಈ ರಥಗಳು ಇನ್ನೂ ತಲುಪಿಲ್ಲ.
ಅಭಿಯಾನಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಹೊರಡಿಸಿರುವ ಮಾರ್ಗಸೂಚಿಗೆ ಎಲ್ಲರೂ ಬದ್ಧವಾಗಿರಬೇಕು. ವಿಶೇಷ ರಥಗಳು ಆಯಾ ಗ್ರಾಮವನ್ನು ತಲುಪುವ ಮೊದಲೇ ಸಂದೇಶ ತಲುಪಿಸಿ ಅಭಿಯಾನಕ್ಕೆ ಒದಗಿಸಿರುವ ಪೌಚುಗಳಲ್ಲಿ ಪವಿತ್ರ ಮೃತ್ತಿಕೆಯನ್ನು ಸಂಗ್ರಹಿಸಬೇಕು ಎಂದು ಸೂಚಿಸಿದರು.
ಹೀಗೆ ಸಂಗ್ರಹವಾದ ಪವಿತ್ರ ಮಣ್ಣನ್ನು ನವೆಂಬರ್ 7ರಂದು ಜಿಲ್ಲಾ ಕೇಂದ್ರಗಳಲ್ಲಿ, ನವೆಂಬರ್ 8ರಂದು ಈ ರಥಗಳು ಬೆಂಗಳೂರನ್ನು ತಲುಪುವಂತೆ ನೋಡಿಕೊಳ್ಳುವುದು ಜಿಲ್ಲಾಧಿಕಾರಿಗಳು ಮತ್ತು ಸಿಇಒಗಳ ಹೊಣೆಯಾಗಿದೆ. ಬಳಿಕ ಪವಿತ್ರ ಮೃತ್ತಿಕೆ ಸ್ವೀಕಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.
ಅಭಿಯಾನವು ಜಿಲ್ಲಾ ಮಟ್ಟಗಳಲ್ಲಿ ಆರಂಭವಾಗಿರುವ ಬಗ್ಗೆ ಸರ್ಕಾರಕ್ಕೆ ಅಧಿಕೃತ ಮಾಹಿತಿ ನೀಡಬೇಕು ಮತ್ತು ನಿರ್ದಿಷ್ಟ ಮಾರ್ಗಗಳಲ್ಲಿ ಸಾಗುವ ಬಗ್ಗೆ ಎಚ್ಚರ ವಹಿಸಬೇಕು. ಅಲ್ಲದೆ ಅಂದಂದಿನ ಪ್ರಗತಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಅವರು ನಿರ್ದೇಶಿಸಿದರು.
ಪ್ರತಿ ಗ್ರಾಮದಲ್ಲೂ ಇರುವ ಪವಿತ್ರ ಕೆರೆಕಟ್ಟೆ, ನದಿ, ಕಲ್ಯಾಣಿ ಅಥವಾ ಪುಷ್ಕರಿಣಿಯಿಂದ ಮೃತ್ತಿಕೆ ಸಂಗ್ರಹವಾಗುವ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಜತೆಗೆ ವಿಶೇಷ ರಥಗಳು ಆಗಮಿಸಿದಾಗ ದೇವಸ್ಥಾನಗಳಲ್ಲಿ ಪೂರ್ಣ ಕುಂಭ ಸ್ವಾಗತಕ್ಕೆ ವ್ಯವಸ್ಥೆ ಮಾಡಬೇಕು ಎಂದು ಅವರು ಕಟ್ಟುನಿಟ್ಟಾಗಿ ಹೇಳಿದ್ದಾರೆ.
ಸಭೆಯಲ್ಲಿ, ಪ್ರಾಧಿಕಾರದ ಸದಸ್ಯ ಹಾಗೂ ಕಂದಾಯ ಸಚಿವ ಆರ್. ಅಶೋಕ್, ಸಚಿವರಾದ ಎಸ್. ಟಿ. ಸೋಮಶೇಖರ್, ನಾರಾಯಣಗೌಡ, ಮುನಿರತ್ನ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ. ಪ್ರದೀಪ್, ಪ್ರಾಧಿಕಾರದ ಆಯುಕ್ತ ವಿನಯ್ ದೀಪ ಉಪಸ್ಥಿತರಿದ್ದರು.