ಕೃಷಿ ರಫ್ತಿನ ಪ್ರಮಾಣ ಹೆಚ್ಚಾದಾಗ ರೈತರ ಆದಾಯ ದ್ವಿಗುಣ: ಶೋಭಾ ಕರಂದ್ಲಾಜೆ
ಬೆಂಗಳೂರು, ಸೆಪ್ಟೆಂಬರ್ : “ಮುಂದಿನ ದಿನಗಳಲ್ಲಿ ರಫ್ತು ಮಾಡುವಂತಹ ಹಣ್ಣು, ತರಕಾರಿ ಮುಂತಾದುವುಗಳನ್ನು ರಸಾಯನಿಕ ರಹಿತ ಮಾಡುವತ್ತ ನಾವು ಗಮನ ಹರಿಸಬೇಕಿದೆ. ನಾವು ಬೇರೆ ಎಲ್ಲದರಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದರೆ ಖಾದ್ಯ ತೈಲದಲ್ಲಿ ಇಲ್ಲ,” ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
“ತೈಲ ತಾಳೆ ಕೃಷಿ ಮಾಡಿ ತೈಲ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿ ಆ ಕ್ಷೇತ್ರದಲ್ಲಿಯೂ ಸ್ವಾವಲಂಬನೆ ಸಾಧಿಸಬೇಕಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ರೈತರ ಆದಾಯದಲ್ಲಿ ದ್ವಿಗುಣ ಸಾಧಿಸಬೇಕೆಂದರೆ ಕೃಷಿ ರಫ್ತಿನ ಪ್ರಮಾಣ ಹೆಚ್ಚಾಗಬೇಕು. ಭಾರತದ ಕೃಷಿ ಭವಿಷ್ಯ ರಫ್ತಿನಲ್ಲಿ ಅಡಗಿದೆ,” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
“ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ- ಅಪಿಡ ಆಯೋಜಿಸಿದ್ದ “ವಾಣಿಜ್ಯ ಉತ್ಸವ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೋವಿಡ್ ಸಾಂಕ್ರಾಮಿಕದ ನಡುವೆಯೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸರ್ಕಾರ ಕೃಷಿಗೆ ಆದ್ಯತೆ ನೀಡಿದೆ. ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆರ್ಥಿಕ ನೆರವು ಒದಗಿಸಲಾಗಿದೆ,” ಎಂದರು.
“ನಾವು ಕಳೆದ ವರ್ಷ ಸಾಂಕ್ರಾಮಿಕದ ಹೊರತಾಗಿಯೂ ಆಹಾರ ಉತ್ಪಾದನೆಯಲ್ಲಿ ಮೇಲುಗೈ ಸಾಧಿಸಿದ್ದೇವೆ. ಇದು ಚಾರಿತ್ರಿಕ ದಾಖಲೆ. ಇದಕ್ಕೆ ರೈತರ ಶ್ರಮ ಹಾಗೂ ಕೇಂದ್ರ ರಾಜ್ಯ ಸರ್ಕಾರದ ಯೋಜನೆಗಳ ಫಲವೂ ಹೌದು. ಆಹಾರ ಧಾನ್ಯ ಉತ್ಪಾದನೆ 305 ದಶಲಕ್ಷ ಮೆಟ್ರಿಕ್ ಟನ್ ಹಾಗೂ ತೋಟಗಾರಿಕೆಯ ಹಣ್ಣು ಮತ್ತು ತರಕಾರಿ ಉತ್ಪಾದನೆಯು 326 ದಶಲಕ್ಷ ಮೆಟ್ರಿಕ್ ಟನ್ ಆಗಿದೆ. ಆದರೆ ಕರ್ನಾಟಕದ ರಫ್ತು ಪ್ರಮಾಣ ಕಡಿಮೆಯೇ ಇದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ರಫ್ತು ಕಡಿಮೆ,” ಎಂದು ಮಾಹಿತಿ ನೀಡಿದರು.
“ಬೇರೆ ದೇಶಗಳಿಗೆ ಅಗತ್ಯವಾದ ಎಷ್ಟೋ ಆಹಾರ ವಸ್ತುಗಳನ್ನು ನಾವು ಉತ್ಪಾದಿಸುತ್ತಿದ್ದೇವೆ. ಆದರೆ ರಫ್ತು ಮಾಡಲು ಅಗತ್ಯವಾದ ಗುಣಮಟ್ಟ ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಬೇಡಿಕೆ ಇರುವ ಕಡೆಗೆ ನಮ್ಮ ಉತ್ಪನ್ನ ಕಳುಹಿಸುವುದರ ಕಡೆಗೆ ಗಮನಹರಿಸಬೇಕು ಮತ್ತು ಅದಕ್ಕೆ ತಕ್ಕನಾದ ಸೌಲಭ್ಯ ಕಲ್ಪಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಗಳು ಗಮನ ನೀಡಬೇಕು. ರಫ್ತು ಗುಣಮಟ್ಟಕ್ಕೆ ಅಗತ್ಯವಾದ ಅಂಶಗಳ ಕಡೆಗೆ ಆದ್ಯತೆ ನೀಡಲು ನಮ್ಮ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ವಿಸ್ತರಿಸಬೇಕು,” ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.