ಕುಂಭಮೇಳ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯವರ ಕುಟುಂಬಕ್ಕೆ ಉತ್ತರ ಪ್ರದೇಶ ಸರ್ಕಾರದಿಂದ ತಲಾ 25 ಲಕ್ಷ ರೂ. ವರ್ಗಾವಣೆ

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಕುಟುಂಬಗಳಿಗೆ ಉತ್ತರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ನೀಡಿದೆ. ಆರ್‌ಟಿಜಿಎಸ್ ಮೂಲಕ ಹಣ ಜಮೆ ಮಾಡಲಾಗಿದೆ. ಘಟನೆ ಸಂಭವಿಸಿದ 40 ದಿನಗಳ ನಂತರ ಪರಿಹಾರದ ಹಣ ವಿತರಣೆಯಾಗಿದೆ. ಕರ್ನಾಟಕ ಸರ್ಕಾರದಿಂದಲೂ ಪರಿಹಾರ ನಿರೀಕ್ಷಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ (Prayagraj) ನಡೆದಿದ್ದ ಮಹಾ ಕುಂಭಮೇಳದ (Maha Kumbh Mela) ಸಂದರ್ಭ ಉಂಟಾದ ಕಾಲ್ತುಳಿತದಲ್ಲಿ ಮೃತಪಟ್ಟ ಬೆಳಗಾವಿಯ (Belagavi) ನಾಲ್ವರ ಕುಟುಂಬದವರಿಗೆ ಉತ್ತರ ಪ್ರದೇಶ ಸರ್ಕಾರ ತಲಾ 25 ಲಕ್ಷ ರೂ. ಪರಿಹಾರ ವಿತರಿಸಿದೆ. ಮೃತಪಟ್ಟವರ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಆರ್‌ಟಿಜಿಎಸ್ ಮೂಲಕ ಪರಿಹಾರ ಮೊತ್ತ ಜಮೆ ಮಾಡಲಾಗಿದೆ. ಬೆಳಗಾವಿ ಮೂಲದ ಜ್ಯೋತಿ ಹತ್ತರವಾಠ, ಮೇಘಾ ಹತ್ತರವಾಠ, ಅರುಣ ಕೋಪರ್ಡೆ ಹಾಗೂ ಮಹಾದೇವಿ ಬಾವನೂರ ಕುಂಭಮೇಳದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದರು. ಘಟನೆ ಸಂಭವಿಸಿದ 40 ದಿನಗಳ ಬಳಿಕ ಉತ್ತರ ಪ್ರದೇಶ ಸರ್ಕಾರದಿಂದ ಪರಿಹಾರದ ಹಣ ವಿತರಣೆ ಮಾಡಲಾಗಿದೆ.ಇತ್ತ ಕರ್ನಾಟಕ ಸರ್ಕಾರದಿಂದಲೂ ಪರಿಹಾರ ನೀಡುವಂತೆ ವರದಿ ರವಾನೆ ಮಾಡಲಾಗಿದೆ ಎಂದು ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.ಬೆಳಗಾವಿಯಿಂದ ಜನವರಿ 26ರಂದು ಮಹಾ ಕುಂಭಮೇಳಕ್ಕೆ ಒಟ್ಟು 13 ಜನ ಹೋಗಿದ್ದರು. ಅವರು ಕುಂಭಮೇಳ ತಲುಪಿದ್ದ ಸಂದರ್ಭದಲ್ಲೇ ಕಾಲ್ತುಳಿತ ಸಂಭವಿಸಿತ್ತು. ಆರಂಭದಲ್ಲಿ ಬೆಳಗಾವಿಯ ಇಬ್ಬರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ ಮತ್ತು ಅವರ ಪುತ್ರಿ ಮೇಘಾ ಹತ್ತರವಾಠ್ ನಾಪತ್ತೆಯಾಗಿದ್ದರು ಎನ್ನಲಾಗಿತ್ತು. ಆದರೆ, ನಂತರ ಇವರಿಬ್ಬರೂ ಮೃತಪಟ್ಟಿರುವುದು ದೃಢಪಟ್ಟಿತ್ತು.ಜನವರಿ 29 ರಂದು, ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 30 ಜನರು ಮೃತಪಟ್ಟಿದ್ದರು ಮತ್ತು ನೂರಾರು ಮಂದಿ ಗಾಯಗೊಂಡಿದ್ದರು. ಮೌನಿ ಅಮಾವಾಸ್ಯಾ ದಿನದಂದು ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಹೆಚ್ಚಿನ ಸಂಖ್ಯೆಯ ಯಾತ್ರಿಕರು ಪ್ರಯಾಗ್ರಾಜ್ಗೆ ಬಂದಿದ್ದರು. ಆ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಜನರು ಬ್ಯಾರಿಕೇಡ್ ತಡೆಗಳನ್ನು ಧಿಕ್ಕರಿಸಿ ನದಿಯ ಕಡೆಗೆ ಹೋಗಲು ಪ್ರಯತ್ನಿಸಿದ್ದರು, ಇದರಿಂದಾಗಿ ಕಾಲ್ತುಳಿತ ಸಂಭವಿಸಿತ್ತು.ದುರಂತದಲ್ಲಿ ಸಾವನ್ನಪ್ಪಿದ ಪ್ರತಿಯೊಬ್ಬರ ಕುಟುಂಬಗಳಿಗೆ ರಾಜ್ಯ ಸರ್ಕಾರದ ಪರವಾಗಿ ನಾವು ತಲಾ 25 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡಲಿದ್ದೇವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದರು. ನ್ಯಾಯಾಂಗ ಆಯೋಗವು ಪ್ರಕರಣದ ತನಿಖೆ ನಡೆಸಲಿದ್ದು, ವರದಿ ಸಲ್ಲಿದಲಿದೆಎಂದು ಯೋಗಿ ಆದಿತ್ಯನಾಥ್ ಹೇಳಿದ್ದರು.