ಕಾವೇರಿ, ಕೃಷ್ಣಾ ಗೋದಾವರಿ ಹಾಗೂ ಪೆನ್ನಾರ್ ನದಿ ಜೋಡಣೆ ಯೋಜನೆ!ನ್ಯಾಯವಾಗಿ ನೀರು ಹಂಚಿಕೆ ಆದರೆ ಮಾತ್ರ ಒಪ್ಪಿಗೆ
ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ನಾಲ್ಕನೇ ಬಜೆಟ್ ನಲ್ಲಿ ನದಿ ಜೋಡಣೆ ಯೋಜನೆ ಕುರಿತು ಕರ್ನಾಟಕ ಸರ್ಕಾರ ಕಾದು ನೋಡುವ ತಂತ್ರ ಅವಲಂಬಿಸಿದೆ. ನದಿ ಜೋಡಣೆಯ ನಂತರ ನೀರು ಹಂಚಿಕೆ ಪ್ರಮಾಣ ಸಮಾಧಾನ ಆಗುವವರೆಗೆ ಸರ್ಕಾರ ಈ ಯೋಜನೆಗೆ ಸಮ್ಮತಿ ಸೂಚಿಸಲ್ಲ ಎಂದು ಸ್ಪಷ್ಟಪಡಿಸಿದೆ.
ನದಿ ಜೋಡಣೆ ಯೋಜನೆ ವಿಚಾರವಾಗಿ ಮಾಧ್ಯಮ ಮಿತ್ರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾವೇರಿ, ಕೃಷ್ಣಾ ಹಾಗೂ ಪೆನ್ನಾರ್ ನದಿ ಜೋಡಣೆ ಯೋಜನೆಗೆ ಎಲ್ಲ ರಾಜ್ಯಗಳ ಒಪ್ಪಿಗೆ ಸಿಕ್ಕ ಬಳಿಕ ಡಿಪಿಆರ್ ಮಾಡಲಾಗುತ್ತದೆ ಎಂದಿದೆ. ಅದು ಚರ್ಚೆಯ ಹಂತದಲ್ಲಿದೆ. ಯೋಜನೆ ಜಾರಿಗೆ ಡಿಪಿಆರ್ ಮಾಡುವ ಸಂದರ್ಭದಲ್ಲಿ ನಮ್ಮ ರಾಜ್ಯದ ಪಾಲು ಸರಿಯಾದ ರೀತಿಯಲ್ಲಿ ನಿರ್ಧಾರ ಆಗಬೇಕು ಎಂದರು.
ಹೊಸ ಡಿಪಿಆರ್ ಮಾಡುವಾಗ ನಮ್ಮ ಜೊತೆ ಚರ್ಚೆ ಮಾಡಲಾಗುತ್ತದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ನಮ್ಮ ಪಾಲು ನಿರ್ಧಾರ ಆಗುವವರೆಗೂ ಡಿಪಿಆರ್ ಆಗಬಾರದು ಎಂಬ ನಿಲುವು. ಕೇವಲ ಕಾವೇರಿ ಅಷ್ಟೇ ಅಲ್ಲ ಕೃಷ್ಣಾನೂ ಇದೆ. ಕೃಷ್ಣಾ ಹಾಗೂ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ನಮ್ಮ ರಾಜ್ಯದ ಪಾಲು ಇನ್ನೂ ಹೆಚ್ಚಾಗಬೇಕು. ನಮ್ಮ ಪ್ರದೇಶದಲ್ಲಿ ಎಷ್ಟು ನೀರು ಉತ್ಪಾದನೆ ಆಗುತ್ತದೆ ಅದರ ಆಧಾರದಲ್ಲಿ ಹಂಚಿಕೆ ಆಗಬೇಕು ಎಂದವರು ತಿಳಿಸಿದರು.
ನದಿಗಳ ನೀರಿನ ಪ್ರಮಾಣ ಹಾಗೂ ರಾಜ್ಯದ ಅವಶ್ಯಕತೆ ಬಗ್ಗೆ ವರದಿ ತಯಾರಿಗೆ ಸೂಚನೆ:
ನದಿ ಜೋಡಣೆ ವಿಚಾರದಲ್ಲಿ ರಾಜ್ಯಕ್ಕೆ ನೀರು ಹಂಚಿಕೆ ಪಾಲು ಪ್ರಮಾಣದಲ್ಲಿ ಯಾವುದೇ ಅನ್ಯಾಯ ಆಗಬಾರದು. ನಮ್ಮ ರಾಜ್ಯದ ನೀರಿನ ಪಾಲು ಸರಿಯಾಗಿ ನಿರ್ಧಾರ ಆಗಬೇಕು. ಹೊಸ ವಿಸ್ತೃತ ಯೋಜನಾ ವರದಿ ತಯಾರು ಆಗುವ ಹಂತದಲ್ಲೇ ರಾಜ್ಯದ ಪಾಲು ನಿರ್ಧಾರ ಆಗಬೇಕು ಎಂಬ ನಿಲುವನ್ನ ಸರ್ಕಾರ ಅನುಸರಿಸಲು ನಿರ್ಧರಿಸಿದೆ.
ಕಾವೇರಿ, ಕೃಷ್ಣಾ, ಗೋದಾವರಿ ಹಾಗೂ ಪೆನ್ನಾರ್ ನದಿಗಳ ವಿವರಗಳನ್ನು ತಯಾರು ಮಾಡಲು ಸರ್ಕಾರ ಅಧಿಕಾರಿಗಳಿಗೆ ಸೂಚಿಸಿದೆ.ಈಗಾಗಲೇ ದೊಡ್ಡ ನೀರಾವರಿ ನದಿ ಯೋಜನೆ ಕುರಿತು ಕೆಲಸ ಆರಂಭವಾಗಿದ್ದು, ನದಿಗಳ ನೀರಿನ ಪ್ರಮಾಣ ಹಾಗೂ ಪ್ರಾದೇಶಿಕವಾಗಿ ಇರುವ ಅವಶ್ಯಕತೆ ಪಟ್ಟಿ ಮಾಡಲಾಗುತ್ತಿದೆ.