ಕಾಮೆಡ್-ಕೆ ಫಲಿತಾಂಶ ಪ್ರಕಟ: ಬೆಂಗಳೂರು ವಿದ್ಯಾರ್ಥಿ ಪ್ರಥಮ
ಬೆಂಗಳೂರು, ಸೆಪ್ಟೆಂಬರ್ 26: ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ ನಡೆಸಲಾದ ಕಾಮೆಡ್-ಕೆ ಯುಜಿ ಪರೀಕ್ಷೆಯ ಫಲಿತಾಂಶ ಭಾನುವಾರ ಪ್ರಕಟಿಸಲಾಗಿದ್ದು, ಬೆಂಗಳೂರಿನ ವೀರೇಶ್ ಬಿ. ಪಾಟೀಲ್ ಮೊದಲ ಸ್ಥಾನ ಪಡೆದಿದ್ದಾನೆ.
ಮೇ ನಲ್ಲಿ ನಡೆಯಬೇಕಾಗಿದ್ದ ಕಾಮೆಡ್-ಕೆ ಪರೀಕ್ಷೆಯನ್ನು ಕೋವಿಡ್ ಎರಡನೇ ಹಂತ , ಲಾಕ್‌ಡೌನ್ ಕಾರಣಗಳಿಂದಾಗಿ ಮೂರು ಬಾರಿ ಮುಂದೂಡಲಾಗಿತ್ತು. ಅಂತಿಮವಾಗಿ ಸೆ.14ರಂದು ಪರೀಕ್ಷೆ ನಡೆಸಲಾಗಿತ್ತು. ದೇಶದಾದ್ಯಂತ 157 ನಗರಗಳಲ್ಲಿ 224 ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ನಡೆದಿತ್ತು. ದೇಶದಾದ್ಯಂತ 180ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಮತ್ತು 30ಕ್ಕೂ ಆಧಿಕ ಖಾಸಗಿ ವಿಶ್ವವಿದ್ಯಾಲಯಗಳು ಎಂಜಿನಿಯರಿಂಗ್ ಪ್ರವೇಶಕ್ಕೆ ಕಾಮೆಡ್-ಕೆ ಪರೀಕ್ಷಾ ಫಲಿತಾಂಶ ಪರಿಗಣಿಸುತ್ತವೆ. ಫಲಿತಾಂಶದ ವಿವರಗಳನ್ನು ವಿದ್ಯಾರ್ಥಿಗಳು ವೆಬ್‌ಸೈಟ್ ಮೂಲಕ ಪಡೆದುಕೊಳ್ಳಬಹುದು.
44,111 ವಿದ್ಯಾರ್ಥಿಗಳು:
ಕಾಮೆಡ್-ಕೆ ಪರೀಕ್ಷೆಯನ್ನು ದೇಶದಾದ್ಯಂತ 66,304 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಈ ಪೈಕಿ 44,111 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ಕರ್ನಾಟಕದ ವಿದ್ಯಾರ್ಥಿಗಳು 16,632 ಮತ್ತು ಹೊರ ರಾಜ್ಯಗಳಿಂದ 27,479 ವಿದ್ಯಾರ್ಥಿಗಳು ಸೇರಿದ್ದಾರೆ. ಪರೀಕ್ಷೆಗೆ ಹಾಜರಾದ ಒಟ್ಟು ವಿದ್ಯಾರ್ಥಿಗಳ ಪೈಕಿ 4660 ವಿದ್ಯಾರ್ಥಿಗಳು ಶೇ.90 ರಿಂದ ಶೇ.100 ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಅದೇ ರೀತಿ 4343 ವಿದ್ಯಾರ್ಥಿಗಳು ಶೇ.80 ರಿಂದ ಶೇ.90 ರಷ್ಟು ಅಂಕ ಗಳಿಸಿದ್ದಾರೆ. ಮೊದಲ 10 ಸ್ಥಾನಗಳ ಪೈಕಿ ಐವರು ಕರ್ನಾಟಕದ ವಿದ್ಯಾರ್ಥಿಗಳು ಹಾಗೂ ಮೊದಲ 100 ಸ್ಥಾನಗಳ ಪೈಕಿ 44 ವಿದ್ಯಾರ್ಥಿಗಳು ರಾಜ್ಯದವರೇ ಆಗಿದ್ದಾರೆ.
“ಕಳೆದ ವರ್ಷದಂತೆ ಈ ಬಾರಿಯೂ ಆನ್‌ಲೈನ್ ಕೌನ್ಸೆಲಿಂಗ್ ಮೂಲಕವೇ ಎಂಜಿನಿಯರಿಂಗ್ ಸೀಟುಗಳಿಗೆ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳು ಎಲ್ಲ ದಾಖಲೆಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ತಜ್ಞರ ಸಮಿತಿ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಮುಂದಿನ ಪ್ರಕ್ರಿಯೆಯನ್ನು ಪ್ರಕಟಿಸಲಾಗುವುದು” ಎಂದು ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಎಸ್.ಕುಮಾರ್ ತಿಳಿಸಿದ್ದಾರೆ.
ಕಾಮೆಡ್-ಕೆ ಯುಜಿ ಪರೀಕ್ಷೆಯಲ್ಲಿ ಮೊದಲ ಹತ್ತು ಸ್ಥಾನ ಪಡೆದ ವಿದ್ಯಾರ್ಥಿಗಳು:
ವೀರೇಶ್ ಬಿ.ಪಾಟೀಲ್- ಬೆಂಗಳೂರು
ಆರ್. ಶಿವಸುಂದರ್- ಬೆಂಗಳೂರು
ಗೌರವ್ ಕಟಾರಿಯಾ- ರಾಜಸ್ಥಾನ
ಕಟಿಕೇಲ ಪುನೀತ್ ಕುಮಾರ್- ಆಂಧ್ರಪ್ರದೇಶ
ರಿಶಿತ್ ಶ್ರೀವಾಸ್ತವ- ರಾಜಸ್ಥಾನ
ಭಾವೇಶ್ ಗುರ್ನಾನಿ- ರಾಜಸ್ಥಾನ
ಎ.ಶ್ರೀಕರ- ಬೆಂಗಳೂರು
ಪಿ. ನಿಶ್ಚಿತ್- ಮೈಸೂರು
ದೀಪಕ್ ಚೌಧರಿ- ಉತ್ತರ ಪ್ರದೇಶ
ಎಂ. ಶ್ರೀಹರ್ಷ ಭಟ್- ಬಳ್ಳಾರಿ