ರಾಜ್ಯ
Trending

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಬಗ್ಗೆ ಅಮಿತ್ ಶಾಗೆ ಮಾಹಿತಿ

ಧರ್ಮಸ್ಥಳದ ವಿಚಾರವಾಗಿ ಷಡ್ಯಂತ್ರ ನಡೆಯುತ್ತಿದೆ. ಇದರ ಹಿಂದೆ ಇರುವವರನ್ನು ರಾಜ್ಯ ಸರ್ಕಾರ ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂಬ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿಸಿದ್ದೇವೆ. ಎಲ್ಲ ವಿಚಾರಗಳನ್ನೂ ಅವರು ಆಲಿಸಿದ್ದಾರೆ. ಅವರ ಗಮನಕ್ಕೆ ತರುವ ಕೆಲಸವನ್ನು ಬಿಜೆಪಿ ನಿಯೋಗ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಸೋಮವಾರ ರಾತ್ರಿ ಅಮಿತ್​ ಶಾ ಅವರನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವಿರೋಧ ಪಕ್ಷದ ನಾಯಕರುಗಳಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಬ್ರಿಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧರ್ಮಸ್ಥಳ ಚಲೋ ಉಸ್ತುವಾರಿ ಹಾಗೂ ಶಾಸಕ ಎಸ್.ಆರ್.ವಿಶ್ವನಾಥ್, ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಸತೀಶ್ ಕುಂಪಲ ಅವರನ್ನು ಒಳಗೊಂಡ ಎಲ್ಲ ರಾಜ್ಯ ಬಿಜೆಪಿ ನಿಯೋಗ ಗೃಹ ಸಚಿವರನ್ನು ಭೇಟಿ ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿರುವ ಹಿಂದೂ ವಿರೋಧಿ ಕಾಂಗ್ರೆಸ್ ಸರ್ಕಾರದ ವಿಚಾರಗಳಾದ ಧರ್ಮಸ್ಥಳ ವಿಚಾರ, ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ, ಕೊಪ್ಪಳದಲ್ಲಿ ಹಿಂದೂ ಕಾರ್ಯಕರ್ತ ಗವಿಸಿದ್ದಪ್ಪ ಅವರ ಹತ್ಯೆ, ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ದಿನೇ ದಿನೆ ಹದಗೆಟ್ಟಿರುವುದು ಮತ್ತು ಸಚಿವ ಸಂಪುಟದಲ್ಲಿ ಕೆಲವು ಕೇಸ್‍ಗಳನ್ನು ರಾಜ್ಯ ಸರ್ಕಾರ ಹಿಂಪಡೆದಿರುವ ಬಗ್ಗೆ ಸವಿಸ್ತಾರವಾಗಿ ಗೃಹ ಸಚಿವರ ಗಮನಕ್ಕೆ ತಂದು ಚರ್ಚೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಯಾವ ರೀತಿ ಪೊಲೀಸ್ ವ್ಯವಸ್ಥೆ ಕುಸಿದು ಬಿದ್ದಿದೆ ಹಾಗೂ ಪೊಲೀಸರಿಗೆ ಯಾವುದೇ ರೀತಿಯ ಅಧಿಕಾರ ಸರ್ಕಾರ ನೀಡದಿರುವ ಬಗ್ಗೆಯೂ ಅಮಿತ್ ಶಾ ಅವರ ಗಮನಕ್ಕೆ ತಂದಿದ್ದೇವೆ. ರಾಜ್ಯದಲ್ಲಿ ನಡೆಯುತ್ತಿರುವ ಕೆಲವು ವಿಚಾರಗಳ ಬಗ್ಗೆ ವಾಸ್ತವಿಕ ಸತ್ಯ ಏನಿದೆ, ಅದನ್ನು ಸಂಪೂರ್ಣವಾಗಿ ಗಮನಕ್ಕೆ ತರುವ ಕೆಲಸವನ್ನು ಮಾತ್ರ ನಾವು ಮಾಡಿದ್ದೇವೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಬಿದ್ದಾಗ, ಹಿಂದೂ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ನಡೆಯುತ್ತಿರುವಾಗ, ಒಂದು ವಿರೋಧ ಪಕ್ಷವಾಗಿ ಇದೆಲ್ಲವನ್ನೂ ಕೇಂದ್ರದ ಗಮನಕ್ಕೆ ತರುವುದು ನಮ್ಮ ಕರ್ತವ್ಯ. ಅಮಿತ್ ಶಾ ಅವರು ಏನು ಪ್ರತಿಕ್ರಿಯೆ ಕೊಟ್ಟರು ಎನ್ನುವುದನ್ನು ಮುಂದೆ ಹೇಳುತ್ತೇವೆ ಎಂದರು.

Related Articles

Leave a Reply

Your email address will not be published. Required fields are marked *

Back to top button