ಕಾಂಗ್ರೆಸ್ ಗೆ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಗುಡ್ ಬೈ?
ಬೆಂಗಳೂರು: ಜೆಡಿಎಸ್ ನ ಹಲವು ಶಾಸಕರು ಪಕ್ಷ ತೊರೆದು ಬಿಜೆಪಿ ಇಲ್ಲವೇ ಕಾಂಗ್ರೆಸ್ ಗೆ ವಲಸೆ ಹೋಗಲು ಮಾನಸಿಕವಾಗಿಸಿದ್ದವಾಗಿರುವಾಗಿರುವಾಗ ಇದಕ್ಕೆ ವಿರೋಧಾಭಾಸವಾಗಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ, ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಲು ತೀರ್ಮಾನಿಸಿದ್ದಾರೆ.
ಮೈಸೂರು ಭಾಗದಲ್ಲಿ ಆಪರೇಷನ್ ಜೆಡಿಎಸ್ ಗೆ ಸಿದ್ಧತೆ ನಡೆಸಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಹಲವು ಕಾಂಗ್ರೆಸ್ ನಾಯಕರನ್ನು ಸಂಪರ್ಕಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.
ಕುಮಾರಸ್ವಾಮಿ ಭೇಟಿ ಬಳಿಕ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿದ್ದ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ಸೇರ್ಪಡೆ ಕುರಿತು ಬಹಳ ಮಹತ್ವದ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ನವೆಂಬರ್ ಬಳಿಕ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ನಂತರ ಕಾಂಗ್ರೆಸ್ ಸದಸ್ಯತ್ವಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿವೆ.
ಈ ಹಿಂದೆ ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್ ಸೇರಲಿದ್ದಾರೆ ಎಂಬ ಬಗ್ಗೆ ಮಾಹಿತಿ ಅರಿತಾಗ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಬ್ರಾಹಿಂ ಅವರನ್ನು ಭೇಟಿ ಮಾಡಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸಿದ್ದರು. ಆದರೆ, ಇಬ್ರಾಹಿಂ ಅವರು ನಿನ್ನೆ ಬಿಡದಿಯಲ್ಲಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆ ಕುರಿತು ಮಾತುಕತೆ ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.