ರಾಜ್ಯ
Trending

ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಬಿಜೆಪಿ ಕಪ್ಪು ಬಾವುಟ ಪ್ರದರ್ಶನ

ಬೆಳಗಾವಿ : ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲ ಬೆಲೆ ಏರಿಕೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮೂಲವಾಗಿದೆ. ಹೀಗಾಗಿ ಜನರ ಆಕ್ರೋಶ ಏನಿದ್ದರೂ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧವಿರಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಸೋಮವಾರ (ಏ. 28) ನಡೆದ ಬೆಲೆ ಏರಿಕೆ ವಿರೋಧಿಸಿ ಹಾಗೂ ಸಂವಿಧಾನ ರಕ್ಷಣೆಗೆ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ, ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದ ಘಟನೆ ನಡೆದಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಗದರಿದ ವಿದ್ಯಮಾನ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದಿದೆ.

“ನಮ್ಮ ಪ್ರತಿಭಟನಾ ಕಾರ್ಯಕ್ರಮಕ್ಕೆ ಬಿಜೆಪಿಯು ತಮ್ಮ ಕಾರ್ಯಕರ್ತರನ್ನು ಕಳುಹಿಸಿ ಕಪ್ಪು ಬಾವುಟ ಪ್ರದರ್ಶಿಸಿ ಗದ್ದಲ ಎಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಬಿಜೆಪಿ ಹಾಗೂ ವಿರೋಧ ಪಕ್ಷದ ನಾಯಕರಿಗೆ ಹೇಳಲು ಬಯಸುತ್ತೇನೆ. ನಿಮ್ಮ ಪ್ರವೃತ್ತಿ ಹೀಗೆ ಮುಂದುವರೆದರೆ ರಾಜ್ಯದಲ್ಲಿ ನೀವು ಒಂದೇ ಒಂದು ಸಭೆ ಮಾಡಲು ನಾವು ಅವಕಾಶ ನೀಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ” ಎಂದು ಡಿ.ಕೆ.ಶಿವಕುಮಾರ್ ಎಚ್ಚರಿಕೆಯನ್ನು ನೀಡಿದ್ದಾರೆ.ಬಿಜೆಪಿ ನಾಯಕರೇ ನೀವು ನಿಮ್ಮ ಕಾರ್ಯಕರ್ತರಿಗೆ ಬುದ್ದಿ ಹೇಳಿ ಸರಿ ಮಾಡಿಕೊಂಡರೆ ಒಳ್ಳೆಯದು. ಇಲ್ಲವಾದರೆ, ಎಲ್ಲಾ ರೀತಿಯ ಪ್ರತಿ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ. ಇದು ಮನವಿಯಲ್ಲ ನಮ್ಮ ಎಚ್ಚರಿಕೆ ಎನ್ನುವುದನ್ನು ಗಮನಿಸಿ ಎಂದು ಉಪ ಮುಖ್ಯಮಂತ್ರಿಗಳು ಕಿಡಿಕಾರಿದರು.

“ನಾನು ನಮ್ಮ ಕಾರ್ಯಕರ್ತರಿಗೆ ಸಂದೇಶ ನೀಡುತ್ತೇನೆ. ಪೆಟ್ರೋಲ್, ಡೀಸೆಲ್, ಚಿನ್ನ, ಕಬ್ಬಿಣ, ಸಿಮೆಂಟ್ ಬೆಲೆ ಏರಿಕೆ ಯಾಕೆ ಆಗಿದೆ ಎಂದು ಬಿಜೆಪಿಯವರನ್ನು ಪ್ರಶ್ನಿಸಿ ಎಂದು ಕರೆ ನೀಡಬೇಕಾಗುತ್ತದೆ. ನೀವು ನಮ್ಮ ವಿರುದ್ಧ ಹೋರಾಟ ಮಾಡುವುದಕ್ಕಿಂತ, ನಾವು ನಿಮ್ಮ ವಿರುದ್ಧ ಹೋರಾಟ ಮಾಡಲು ನನಗೆ ಹೆಚ್ಚಿನ ಕಾರ್ಯಕ್ಷಮತೆ ಇದೆ ” ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ಹೊರಹಾಕಿದರು.

ಭಾರತದ ಸ್ವಾತಂತ್ರ್ಯಕ್ಕೆ ಪ್ರಾಣ ತ್ಯಾಗ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಹೋರಾಟ ಹೊಸದಲ್ಲ. ಬ್ರಿಟಿಷರನ್ನೇ ಒದ್ದೋಡಿಸಿದ ನಮಗೆ ನೀವು ಬಿಜೆಪಿ – RSS ಅನ್ನೂ ಎದುರಿಸಿ ನಿಲ್ಲುವ ಶಕ್ತಿ ಇದೆ. ನಾವು ಹಾಲಿನ ದರ 4 ರೂ ಹೆಚ್ಚಿಸಿ, ಇಡೀ 4 ರೂಪಾಯಿಯನ್ನು ಪೂರ್ತಿಯಾಗಿ ರೈತರಿಗೆ, ಗೋಪಾಲಕರಿಗೆ, ಗೋ ಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೀವಿ ಎಂದು ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿ ಸರ್ಕಾರ ಭಾವನೆಗಳ ಮೇಲೆ ರಾಜಕಾರಣ ಮಾಡುತ್ತದೆ. ನಾವು ಬದುಕಿನ ಮೇಲೆ ಕೆಲಸ ಮಾಡುತ್ತಿದ್ದೇವೆ. ಜನರ ಬದುಕು ಕಾಪಾಡಲು ನಮ್ಮ ಸರ್ಕಾರ ಗ್ಯಾರಂಟಿ ಯೋಜನೆ ನೀಡಿದೆ. ಗ್ಯಾರಂಟಿ ಯೋಜನೆಗಳು ಮಾತ್ರವಲ್ಲದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇವೆ. ನೀವು ಬಿಜೆಪಿಯವವರಿಗೆ ಈ ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯ ಪಟ್ಟರು.ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನವೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಹಾಲಿನ ಬೆಲೆ ಹೆಚ್ಚಾಗಿದೆ ಎಂದು ಬಿಜೆಪಿಯವರು ನಮ್ಮ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಅವರು ಜನಾಕ್ರೋಶ ಆರಂಭಿಸಿದ ದಿನವೇ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಅಡುಗೆ ಅನಿಲ ಬೆಲೆ ಏರಿಸಿದ್ದಾರೆ. ಪೆಟ್ರೋಲ್ ಡೀಸೆಲ್ ಬೆಲೆ ಏರಿದಾಗ ಎಲ್ಲಾ ಪದಾರ್ಥಗಳ ಬೆಲೆ ಕೂಡ ಸಹಜವಾಗಿ ಏರಿಕೆಯಾಗುತ್ತದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.


Related Articles

Leave a Reply

Your email address will not be published. Required fields are marked *

Back to top button