ಇತ್ತೀಚಿನ ಸುದ್ದಿ

ಕಳಪೆ ಕಾಮಗಾರಿ ಕಾರಣಕ್ಕೆ ಬಿಬಿಎಂಪಿ ಮು.ಅ. ಬಿ.ಎಸ್‌.ಪ್ರಹ್ಲಾದ್ ಹಾಗೂ ಇಬ್ಬರು ಅಧಿಕಾರಿಗಳು ಅಮಾನತು…

ಬೆಂಗಳೂರು, ಸೆಪ್ಟಂಬರ್ 30: ನ್ಯೂ ಬಿಇಎಲ್ ರಸ್ತೆಯಲ್ಲಿ ಕಳಪೆ ಕಾಮಗಾರಿ ನಡೆದಿದ್ದು, ಕರ್ತವ್ಯ ಲೋಪದ ಹಿನ್ನೆಲೆ ಇಬ್ಬರು ಬಿಬಿಎಂಪಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

ಒಳಚರಂಡಿ ಹೂಳು ತೆಗೆಯುವಲ್ಲಿ ವಿಫಲವಾದ ಕಾರಣಕ್ಕೆ ಬಿಬಿಎಂಪಿ ರಸ್ತೆ ಮೂಲಸೌಕರ್ಯ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಎಸ್‌.ಪ್ರಹ್ಲಾದ್ ಅವರು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಸಿ.ಕೃಷ್ಣೇಗೌಡ ಮತ್ತು ಸಹಾಯಕ ಎಂಜಿನಿಯರ್ ವಿಷಕಂಠ ಮೂರ್ತಿ ಅವರನ್ನು ಅಮಾನತುಗೊಳಿಸಿದ್ದಾರೆ.

ಈ ಹಿಂದೆಯೇ ನ್ಯೂ ಬಿಇಎಲ್ ರಸ್ತೆಯಲ್ಲಿನ ಗುಂಡಿಗಳನ್ನು ನಿಗದಿತ ಸಮಯಕ್ಕೆ ಸರಿಪಡಿಸಲು ಸೂಚಿಸಲಾಗಿತ್ತು. ಅದರಂತೆ ಕಾಮಗಾರಿ ನಡೆಸಿದ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿಯು ಒಳಚರಂಡಿಯಲ್ಲಿನ ಹೂಳು ತೆಗೆಯುವುದು, ರಸ್ತೆಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿತ್ತು. ಆದರೆ ಈ ಕೆಲದಲ್ಲಿ ಗುಣಮಟ್ಟ ಕಾಯ್ದುಕೊಳ್ಳದ ಹಿನ್ನೆಲೆ ಕಳಪೆ ಕಾಮಗಾರಿ ಸಾಬೀತಾಗಿತ್ತು.

ಇದಾದ ಬಳಿಕ ನಡೆದ ಕಳೆದ ತಿಂಗಳ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಬಿ.ಆರ್.ರವಿಕಾಂತೇಗೌಡ ಅವರು ಕಳೆಪೆ ಕಾಮಗಾರಿ ನಡೆದಿದೆ ಎಂದು ದೂರು ನೀಡಿದ್ದರು. ಈಗಾಗಲೇ ಜನರು ಅಧಿಕಾರಿಗಳ ನಿರ್ಲಕ್ಷ್ಯ, ರಾಜಕಾಲುವೆ ಒತ್ತುವರಿ , ಪ್ರವಾಹ ಮುಂತಾದ ಕಾರಣಗಳಿಗಾಗಿ ಬಿಬಿಎಂಪಿಯನ್ನು ದೂರುತ್ತಿದ್ದಾರೆ. ಈ ಮಧ್ಯೆ ಪೊಲೀಸ್ ಅಧಿಕಾರಿಗಳಿಂದಲೇ ಬಂದ ದೂರನ್ನ ಬಿಬಿಎಂಪಿ ಗಂಭೀರವಾಗಿ ಪರಿಗಣಿಸಿದೆ. ಅದರನ್ವಯ ಕಳಪೆ ಕೆಲಸಕ್ಕೆ ಕಾರಣರಾದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಸಿ.ಕೃಷ್ಣೇಗೌಡ ಮತ್ತು ಸಹಾಯಕ ಎಂಜಿನಿಯರ್ ವಿಷಕಂಠ ಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ನಂತರ ಮುಖ್ಯ ಎಂಜಿನಿಯರ್ ಪ್ರಹ್ಲಾದ್ ಅವರು ಉನ್ನತ ಅಧಿಕಾರಿಗಳ ಜತೆಗೆ ನ್ಯೂ ಬಿಇಎಲ್‌ ರಸ್ತೆಯ ಪ್ರದೇಶದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶೋಲ್ಡರ್ ಡ್ರೈನ್‌ಗಳ ಹೂಳು ತೆರವು ಮಾಡಬೇಕು, ನಂತರ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದರು ಎಂದು ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತ ಯೋಗೇಶ್ ತಿಳಿಸಿದರು.

ಬಿಬಿಎಂಪಿಯಿಂದ ಅಕ್ಟೋಬರ್ ತಿಂಗಳ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ಸಭೆಯಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ಬಿಬಿಎಂಪಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಪೊಲೀಸ್‌ ಇಲಾಖೆ ಗುರುತಿಸಿರುವ 4,545 ಗುಂಡಿಗಳ ಪೈಕಿ ಬಾಕಿ ಇರುವ 1,051 ಗುಂಡಿಗಳನ್ನು ಮುಚ್ಚಿ ದುರಸ್ತಿಗೊಳಿಸುವಂತೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಬೆಂಗಳೂರಿನ ಎಂಟು ಪ್ರಮುಖ ರಸ್ತೆ ಜಂಕ್ಷನ್‌ಗಳಾದ ಸಿಲ್ಕ್‌ ಬೋರ್ಡ್, ಜಯದೇವ, ಎಂ.ಎಂ ಟೆಂಪಲ್ (ಟಿನ್ ಫ್ಯಾಕ್ಟರಿ), ಹೆಬ್ಬಾಳ, ಗೊರಗುಂಟೆಪಾಳ್ಯ, ಸಾರಕ್ಕಿ, ಕೆ.ಎಸ್ ಲೇಔಟ್ ಮತ್ತು ಬನಶಂಕರಿಯ ರಸ್ತೆ ಜಂಕ್ಷನ್‌ಗಳ ಸಂಚಾರ ದಟ್ಟಣೆ ಕಡಿಮೆ ಮಾಡಿ. ಅದಕ್ಕಾಗಿ ಬಾಕಿ ಕಾಮಗಾರಿ ಕೆಲಸಗಳನ್ನು ಪೂರ್ಣಗೊಳಿಸಲು ಅವರು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button