ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ರೈತರ ಬೆಳೆಗಳಿಗೆ ನೀರು ಹರಿಸಲು ಒತ್ತಾಯ.
ಮದ್ದೂರು
ಕೆಆರ್ಎಸ್ ಅಣೆಕಟ್ಟೆಯಿಂದ ರೈತರು ಬೆಳೆದಿರುವ ಬೆಳೆಗಳಿಗೆ ಸಮರ್ಪಕವಾಗಿ ನೀರನ್ನು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಉಭಯ ಸರ್ಕಾರಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಹಿರಿಯ ನಾಯಕ ಅಣ್ಣೂರು ಮಹೇಂದ್ರ ಅವರು ಮಾತನಾಡಿ, ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಕಬ್ಬು, ರೇಷೆ,್ಮ ಭತ್ತ, ರಾಗಿ, ತೆಂಗು, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆದಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ನೀರಿನ ಕೊರತೆ ಎದುರಾಗಿ ರೈತರು ಬೆಳೆದ ಬೆಳೆಗಳು ಒಣಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ರೈತನ ಗೋಳು ಕೇಳುವವರಿಲ್ಲದಂತಾಗಿದೆ. ಆದ್ದರಿಂದ ರೈತರು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವ ಉದ್ದೇಶಕ್ಕಾಗಿ, ಈ ನಾಡಿಗೆ ಅನ್ನ ನೀಡುವ ರೈತನ ಜೀವನದ ಉಳಿವಿಗಾಗಿ ಕೆಆರ್ಎಸ್ ಅಣೆಕಟ್ಟೆಯಿಂದ ವಿಸಿ ನಾಲೆಗಳ ಮೂಲಕ ನೀರು ಹರಿಸುವ ಪ್ರಕ್ರಿಯೆಗೆ ಈ ಕೂಡಲೇ ಚಾಲನೆ ನೀಡಬೇಕು ಎಂದು ಆಗ್ರಹಿಸಿದರು.
ಕೆರೆ ಕಟ್ಟೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ಎದುರಾಗುವ ಸಾಧ್ಯತೆ ಇದೆ. ಆದ್ದರಿಂದ ಮದ್ದೂರು ತಾಲೂಕಿನ ಕೊನೆ ಭಾಗ ಹಾಗೂ ಕೊಪ್ಪ ಹೋಬಳಿಯ ಎಲ್ಲಾ ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲವನ್ನು ಹೆಚ್ಚಿಸಲು ಅನುವು ಮಾಡಿಕೊಡಬೇಕು. ಶಿಂಷಾ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಿ ರೈತರ ಬೆಳೆಗಳಿಗೆ ಮರು ಜೀವ ನೀಡಬೇಕು. 2012ರಲ್ಲಿ ಕೆಆರ್ಎಸ್ ನಲ್ಲಿ 70 ಅಡಿ ನೀರಿದ್ದಾಗ ಆಗಲೇ ಆನ್ ಅಂಡ್ ಆಫ್ ಪದ್ಧತಿಯಲ್ಲಿ ಕೊನೆ ಭಾಗಕ್ಕೆ ಮೂರು ದಿನಗಳಲ್ಲಿ ನೀರನ್ನು ಹರಿಸಲಾಗಿತು.್ತ ಈಗ ಕೆಆರ್ಎಸ್ ಅಣೆಕಟ್ಟೆಯಲ್ಲಿ 90 ಅಡಿ ನೀರಿದ್ದು, ಈಗಲೂ ಸಹ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರನ್ನು ಹರಿಸಿದರೆ ಕಾವೇರಿ ಹೆಚ್ಚುಕಟ್ಟು ಪ್ರದೇಶದ ಕೊನೆಯ ಭಾಗಕ್ಕೆ ಶೀಘ್ರವಾಗಿ ನೀರು ತಲುಪಿ ಕೊನೆಯ ಭಾಗದ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಇದರ ಬಗ್ಗೆ ಅಧಿಕಾರಿಗಳು ಮತ್ತು ಸಕರ್ಾರ ಗಂಭೀರವಾಗಿ ಪರಿಗಣಿಸಿ ತಕ್ಷಣ ನೀರು ಕೊಡುವ ವ್ಯವಸ್ಥೆಯನ್ನು ಮಾಡಬೇಕು ಎಂದು ಒತ್ತಾಯಿಸಿದರು.
ತಾಲ್ಲೂಕು ಕಚೇರಿಯಿಂದ ಕಾವೇರಿ ನೀರಾವರಿ ನಿಗಮದ ವರೆಗೆ ತಟಮೆ ನಗಾರಿಗಳೊಂದಿಗೆ ರೈತರು ಮೆರವಣಿಗೆ ನಡೆಸಿದರು.
ಕಾರ್ಯಾಪಾಲಕ ಇಂಜಿನಿಯರ್ ನಂಜುಂಡೇಗೌಡ, ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ನಾಗರಾಜು ಅವರು ರೈತರಿಂದ ಸ್ವೀಕರಿಸಿ ಮಾತನಾಡಿ, ತಮ್ಮ ಮನವಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ರಾಮಕೃಷ್ಣಯ್ಯ, ಸೊ.ಶಿ. ಪ್ರಕಾಶ, ಚನ್ನಸಂದ್ರ ಲಕ್ಷ್ಮಣ್, ಉಮೇಶ, ನಾಗರಾಜು, ಕೃಷ್ಣ, ಚನ್ನಪ್ಪ, ಪಣ್ಣೆದೊಡ್ಡಿ ವೆಂಕಟೇಶ್, ರಮೇಶ್, ಅರಗಿನಮೇಳೆ ರಾಮೇಗೌಡ, ಪ್ರಭುಲಿಂಗ, ಕೊತ್ತನಹಳ್ಳಿ ಉಮೇಶ್, ಗುಡಿದೊಡ್ಡಿ ಶಿವಲಿಂಗಯ್ಯ ಸೇರಿದಂತೆ ಇತರರು ಇದ್ದರು.