ಕರ್ನಾಟಕ ಕರಾವಳಿಯಲ್ಲಿ ಭಾರೀ ಮಳೆ, ಆರೆಂಜ್ ಅಲರ್ಟ್
ರಾಜ್ಯದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಜುಲೈ 8ರವರೆಗೂ ಗುಡುಗು ಸಹಿತ ಭಾರೀ ಮಳೆ ಮುಂದುವರಿಯುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಭಾರತೀಯ ಹವಾಮಾನ ಇಲಾಖೆ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಮತ್ತು ‘ಯೆಲ್ಲೋ ಅಲರ್ಟ್’ ಘೋಷಿಸುವ ಮೂಲಕ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ಕರಾವಳಿ ಭಾಗದಲ್ಲಿ ಮುಂಗಾರು ಮಾರುತಗಳು ಹೆಚ್ಚು ಸಕ್ರಿಯವಾಗಿದ್ದರಿಂದ ಮಳೆ ಕಳೆದೊಂದು ವಾರದಿಂದ ಆ ಭಾಗದಲ್ಲಿ ಸುರಿಯುತ್ತಲೇ ಇದೆ. ಇದೀಗ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜುಲೈ 8ರವರೆಗೂ ಮತ್ತೆ ಮಳೆ ಮುಂದುವರಿಯುವ ಸಾಧ್ಯತೆ ಇದೆ.
ಮುಂದಿನ ಐದು ದಿನಗಳ ಪೈಕಿ ಜುಲೈ 5 ಮತ್ತು 6 ರಂದು ಮಳೆಯ ತೀವ್ರತೆ ಹೆಚ್ಚಾಗುವ ಕಾರಣಕ್ಕೆ ಅಂದು ಕರಾವಳಿಯ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಘೋಸಿಲಾಗಿದೆ. ಉಳಿದ ದಿನ ‘ಯೆಲ್ಲೋ ಅಲರ್ಟ್’ ನೀಡಲಾಗಿದೆ.
ಸಮುದ್ರ ತೀರ ಪ್ರದೇಶಗಳಲ್ಲಿ ಗಾಳಿಯು ಪ್ರತಿ ಗಂಟೆಗೆ ಸುಮಾರು 50 ಕಿ. ಮೀ. ವೇಗದಲ್ಲಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ದೈದ್ಯ ಅಲೆಗಳು ತೀರಕ್ಕೆ ಬಂದು ಅಪ್ಪಳಿಸುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಅಧಿಕಾರಿಗಳು ತಿಳಿಸಿದ್ದಾರೆ.
ಮಲೆನಾಡು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
ಇನ್ನು ಕರಾವಳಿ ಜತೆಗೆ ಮಲೆನಾಡಿನ ಕೆಲವು ಜಿಲ್ಲೆಗಳಲ್ಲಿ ಸಹ ಮಳೆ ಅಬ್ಬರಿಸಲಿದೆ ಎಂದು ಮುನ್ಸೂಚನೆ ತಿಳಿಸಲಾಗಿದೆ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಜುಲೈ 5ರವರೆಗೂ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಂಭವವಿದೆ. ಈ ಕಾರಣಕ್ಕೆ ಐದು ದಿನವು ಈ ಜಿಲ್ಲೆಗಳು ‘ಯೆಲ್ಲೋ ಅಲರ್ಟ್’ ಪಡೆದಿವೆ. ಈಗಾಗಲೇ ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ.
ಮುಂಗಾರು ದುರ್ಬಲ
ಉತ್ತರ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿದೆ. ಜು.5 ರವೆಗೂ ಜೋರು ಮಳೆ ಬಾರದೆ ಅಲ್ಲಲ್ಲಿ ತುಂತುರು ಇಲ್ಲವೇ ಸೋನೆ ರೂಪದಲ್ಲಿ ಮಳೆ ಬೀಳಲಿದೆ. ನಂತರ ಜು.8ರವರೆಗೆ ಈ ಭಾಗದಲ್ಲಿ ಮುಂಗಾರು ಮಾರುತಗಳು ಚುರುಕುಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಜು.6, 8ರವರೆಗೆ ಅವಧಿಗೆ ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ ಯಾದಗಿರಿ, ಬೆಳಗಾವಿ ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ಪಡೆದಿವೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.
ದಕ್ಷಿಣ ಒಳನಾಡಿನ ಭಾಗದಲ್ಲಿ ಅಷ್ಟಾಗಿ ಮಳೆ ಬಾರದಿದ್ದರೂ ಕೆಲವು ಪ್ರದೇಶಗಳಲ್ಲಿ ಚದರಿದಂತೆ ಮಳೆ ಆಗುವ ಲಕ್ಷಣಗಳಿವೆ. ಇಡಿ ದಿನ ತಂಪು ಮತ್ತು ಮೋಡ ಮುಸುಕಿನ ವಾತಾವರಣ ಕಂಡು ಬರಲಿದೆ ಎಂದು ತಿಳಿದು ಬಂದಿದೆ.
ಕರಾವಳಿಯಲ್ಲಿ ಉತ್ತಮ ಮಳೆ ದಾಖಲು
ಭಾನುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಹಿಂದಿನ 24ಗಂಟೆಯಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆ ದಾಖಲಾಗಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 46.6 ಮಿ. ಮೀ., ಗೋಕರ್ಣದಲ್ಲಿ 15.2 ಅಧಿಕ ಮಳೆ ದಾಖಲಾಗಿದೆ. ಉಳಿದಂತೆ ಹೊನ್ನಾವರ, ಹಾಸನ, ಚಿಕ್ಕಮಗಳೂರಿನ ಕೆಲವು ಪ್ರದೇಶಗಳು ಉತ್ತಮ ಮಳೆ ಕಂಡಿವೆ.
ಬಳ್ಳಾರಿ ಮತ್ತು ಹಂಪಿಯಲ್ಲಿ ತಲಾ 33.6 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿದ್ದು, ಮಡಿಕೇರಿಯಲ್ಲಿ 17.6 ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ವರದಿ ಉಲ್ಲೇಖಿಸಿದೆ.
ಬೆಂಗಳೂರಿಗೆ ಏನಿದೆ ಮುನ್ಸೂಚನೆ
ಮುಂದಿನ 48 ಬೆಂಗಳೂರಿನಲ್ಲಿ ತೇವಾಂಶ ಭರಿತ ಗಾಳಿ ಬೀಸಲಿದೆ. ಎಲ್ಲೆಡೆ ತಂಪು ವಾತಾವರಣ ಕಂಡು ಬರಲಿದ್ದು, ಅಲ್ಲಲ್ಲಿ ಚದುರಿದಂತೆ ಸಾಮಾನ್ಯದಿಂದ ಹಗುರ ಪ್ರಮಾಣದ ಮಳೆ ಬೀಳುವ ಸಾಧ್ಯತೆ. ಈ ವೇಳೆ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20 ಡಿ.ಸೆ. ಇರಲಿದೆ ಎಂದು ಅಂದಾಜಿಸಲಾಗಿದೆ.