ಕರ್ನಾಟಕ; ಅಕ್ಟೋಬರ್ 4ರ ತನಕ ವಿವಿಧ ಜಿಲ್ಲೆಗಳಲ್ಲಿ ಮಳೆ
ಬೆಂಗಳೂರು, ಅಕ್ಟೋಬರ್ 01; ಕರ್ನಾಟಕದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕೆಲವು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್ ಘೋಷಣೆ ಮಾಡಿದೆ.
ಶಾಹೀನ ಚಂಡಮಾರುತ ಶುಕ್ರವಾರ ಭಾರತ ಪ್ರವೇಶಿಸಲಿದೆ. ಚಂಡಮಾರುತದ ಪರಿಣಾಮ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ಅಕ್ಟೋಬರ್ 4 ತನಕ ಮಳೆಯಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಮಂಡ್ಯ, ರಾಮನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.
ಶುಕ್ರವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಳೆ ಹೆಚ್ಚಾಗಲಿದೆ.ಶಾಹೀನ್ ಚಂಡಮಾರುತ ಶುಕ್ರವಾರ ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಇದರ ಪರಿಣಾಮ ಮಳೆಯಾಗಲಿದ್ದು, ಕೊಡಗು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಇನ್ನು ಎರಡು ದಿನ ಮಳೆ ಸುರಿಯುವ ಸಾಧ್ಯತೆ ಇದೆ.
ಚಂಡಮಾರುತದ ಪರಿಣಾಮದಿಂದಾಗಿ ಬಿಹಾರ, ಅಸ್ಸಾಂ, ಮೇಘಾಲಯ, ಉತ್ತರ ಪ್ರದೇಶ, ಉತ್ತರಾಖಂಡ, ನಾಗಾಲ್ಯಾಂಡ್, ಮಣಿಪುರ, ವಿಜೋರಾಂ, ತ್ರಿಪುರ, ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾ, ಕೇರಳ, ತೆಲಂಗಾಣ, ಅರುಣಾಚಲ ಪ್ರದೇಶದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಗುಲಾಬ್ ಚಂಡಮಾರುತವೇ ಅರಬ್ಬಿ ಸಮುದ್ರದಲ್ಲಿ ಶಾಹೀನ್ ಆಗಿ ಮರುರೂಪ ಪಡೆಯಲಿದೆ. ಇದರಿಂದಾಗಿ ಅರಬ್ಬಿ ಸಮುದ್ರದ ನೈಋತ್ಯ ಭಾಗದಲ್ಲಿ ಹಾಗೂ ಗುಜರಾತ್ ಸುತ್ತಮುತ್ತ ಮಳೆಯಾಗಲಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಶುಕ್ರವಾರ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಗುರುವಾರ ಹಳೆ ಮೈಸೂರು ಭಾಗದಲ್ಲಿ ಉತ್ತಮವಾಗಿ ಮಳೆಯಾಗಿದೆ. ಮೈಸೂರು, ಮಂಡ್ಯದಲ್ಲಿ ಭಾರೀ ಮಳೆಯಾಗಿದೆ. ಮೈಸೂರಿನಲ್ಲಿ ಆಟೋ ಮೇಲೆ ಮರ ಬಿದ್ದು, ಬನ್ನಿಮಂಟಪದ ನಿವಾಸಿ ಏಜಾಜ್ ಪಾಷಾ ಮೃತಪಟ್ಟಿದ್ದಾರೆ. ಮೈಸೂರು ನಗರ, ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆ, ಕೆ. ಆರ್. ಪೇಟೆಗಳಲ್ಲಿ ಮಳೆ ಸುರಿದಿದೆ.
ಜೂನ್ 1 ರಿಂದ ಸೆಪ್ಟೆಂಬರ್ 30ರ ತನಕ ಭಾರತದಲ್ಲಿ ಮುಂಗಾರು ಅವಧಿಯಾಗಿದೆ. ಈ ವರ್ಷ ನಾಲ್ಕು ತಿಂಗಳ ಅವಧಿಯಲ್ಲಿ ದೇಶದಲ್ಲಿ ಸಾಮಾನ್ಯ ಮಟ್ಟದ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅಕ್ಟೋಬರ್-ಡಿಸೆಂಬರ್ ತನಕ ದೇಶದ ದಕ್ಷಿಣ ರಾಜ್ಯದಲ್ಲಿ ಈಶಾನ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಈ ವರ್ಷದ ಜೂನ್ ತಿಂಗಳಿನಲ್ಲಿ ವಾಡಿಕೆಗಿಂತ ಶೇ 7ರಷ್ಟು ಮಳೆ ಕಡಿಮೆಯಾಗಿತ್ತು. ಆಗಸ್ಟ್ ತಿಂಗಳಿನಲ್ಲಿ ಶೇ 24ರಷ್ಟು ಮಳೆ ಕಡಿಮೆಯಾಗಿತ್ತು. ಸೆಪ್ಟೆಂಬರ್ನಲ್ಲಿ ಚಂಡಮಾರುತದ ಪರಿಣಾಮ ಉತ್ತಮ ಮಳೆಯಾಗಿದ್ದು, ಮಳೆಯ ಕೊರತೆ ಉಂಟಾಗಿಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.
ನೈಋತ್ಯ ಮುಂಗಾರು ಅಕ್ಟೋಬರ್ 6ರ ವೇಳೆಗೆ ದೇಶದ ವಾಯುವ್ಯ ಭಾಗದಲ್ಲಿ ಕೊನೆಯಾಗಲಿದೆ. ಆದರೆ ಶಾಹೀನ್ ಚಂಡಮಾರುತದ ಪ್ರಭಾವದಿಂದಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ಅಂದಾಜಿಸಲಾಗಿದೆ.