ಕನ್ನಡ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿ, ಕನ್ನಡ ಭಾಷೆಗೆ ಆದ್ಯತೆ ನೀಡಿ: ಶಾಸಕ ಕೆ.ವೈ.ನಂಜೇಗೌಡ
ಮಾಲೂರು:
ಹಲವಾರು ವರ್ಷಗಳಿಂದ ಕರ್ನಾಟಕ ಜನಸೇವಕ ಸಂಘವು ಕನ್ನಡ ಭಾಷೆ, ನೆಲೆ ಜೊತೆಗೆ ಜನರ ಸೇವೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಶ್ಲಾಘನೀಯ. ಕನ್ನಡ ಪರ ಸಂಘಟನೆಗಳು ಎಂದರೆ ನಾಡು, ಭಾಷೆ, ಗಡಿ ರಕ್ಷಣೆ ದುಡಿಯುತ್ತಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ಶಾಸಕ ಕೆ.ವೈ.ನಂಜೇಗೌಡರು ತಿಳಿಸಿದರು.
ತಾಲ್ಲೂಕಿನ ಟೇಕಲ್‌ನಲ್ಲಿ ಸೋಮವಾರ ಕರ್ನಾಟಕ ಜನ ಸೇವಕ ಸಂಘವು ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ತಾಯಿ ಭುವನೇಶ್ವರಿಗೆ ಪೂಜೆ ಸಲ್ಲಿಸಿ ನಾಡಭಾವುಟ ಹಾರಿಸಿ ಮಾತನಾಡಿದರು.
ಸಂಘದ ಸಂಸ್ಥಾಪಕ ಉಳ್ಳೇರಹಳ್ಳಿ ಮಂಜುನಾಥಗೌಡರ ಸೇವೆ ಅಪಾರವಾದದ್ದು ಪ್ರತಿ ವರ್ಷ ರಾಜ್ಯೋತ್ಸವದಂದು ಬಡವರಿಗೆ, ವಿಕಲಾಂಗರಿಗೆ ವಾಕರ್, ಅಕ್ಕಿ, ದಿನಸಿ ನೀಡುತ್ತಾ ಸಹಾಯ ಹಸ್ತ ನೀಡಿ ಉತ್ತಮ ಸಮಾಜ ಸೇವೆಯನ್ನು ಮಾಡುತ್ತಾ ಅವರ ಕಷ್ಟಕ್ಕೆ ಸ್ಪಂದಿಸುತ್ತಿರುವುದು ಎಲ್ಲರೂ ಮೆಚ್ಚುವಂತಹದ್ದು ಎಂದರು.
ಎಲ್ಲರೂ ಕನ್ನಡ ಭಾಷೆ ಮಾತಾಡಬೇಕು, ಕನ್ನಡ ಶಾಲೆಗಳಲ್ಲಿಯೂ ಮಕ್ಕಳನ್ನು ದಾಖಲಿಸಬೇಕು. ಜೊತೆಗೆ ಆಂಗ್ಲ ಭಾಷೆಯನ್ನು ಕಲಿಯಬೇಕು ಎಂದರು. ವ್ಯಾಪಾರಸ್ಥರು, ವಾಣಿಜ್ಯ ಮಳಿಗೆಯವರು ಮತ್ತು ಇತರೆ ಅಂಗಡಿ ವಹಿವಾಟಿನವರು ಕನ್ನಡ ಭಾಷೆ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದರು.
ಕರ್ನಾಟಕ ಜನಸೇವಕ ಸಂಘದ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಕೆ.ವಿ.ಆರ್ ಮಂಜುನಾಥಗೌಡ ಮಾತನಾಡಿ, ಪ್ರತಿವರ್ಷ ನಿರಂತರವಾಗಿ ನಿರ್ಗತಿಕರಿಗೆ ದಿನಸಿ, ಮಹಿಳೆಯರಿಗೆ ಸೀರೆ ಹಾಗೂ ವಿಶೇಷಚೇತನರಿಗೆ ಪರಿಕರಗಳಾದ ಊರುಗೋಲು (ವಾಕಿಂಗ್ ಸ್ಟಿಕ್) ಗಾಲಿಚೇರು, ಅಕ್ಕಿ ವಿತರಣೆ ಮಾಡುತ್ತಿದ್ದು ಈ ಭಾರಿಯೂ 2 ಸಾವಿರಕ್ಕೂ ಹೆಚ್ಚು ಮಂದಿಗೆ ನೀಡಲಾಗಿದೆ. ಆರೋಗ್ಯ ಚಿಕತ್ಸೆಗೆ ಸಹಾಯ ಹಾಗೂ ಬಡಮಕ್ಕಳಿಗೆ ಶೈಕ್ಷಣಿಕ ಸಹಕಾರ ಸೇರಿದಂತೆ ಹಲವಾರು ಸಮಾಜಸೇವೆ ಮಾಡುತ್ತಾ ಬಂದಿದ್ದು, ರಾಜ್ಯಾದ್ಯಂತ ಸಂಘಟನೆಯನ್ನು ಬಲಪಡಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಕನ್ನಡಿಗರಿಗೆ ಹೆಚ್ಚು ಉದ್ಯೋಗ ನೀಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಯೋಗದಲ್ಲಿ ಶೇಕಡ 60% ರಷ್ಟು ಅವಕಾಶ ಕಲ್ಪಿಸಲು ಮುಂದಾಗಿರುವುದು ಸ್ವಾಗತಾರ್ಹ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಉಳ್ಳೇರಹಳ್ಳಿ ವೆಂಕಟೇಶ್, ಜಿಲ್ಲಾಧ್ಯಕ್ಷ ಎಸ್.ಪ್ರಕಾಶ್, ತಾಲ್ಲೂಕು ಅಧ್ಯಕ್ಷ ದೊಡ್ಡಮಲ್ಲೆ ಚಲಪತಿಗೌಡ, ಶ್ಯಾಮ್, ಶಶಿಧರ್, ಜಂಗಾನಹಳ್ಳಿ ಶ್ರೀನಿವಾಸ್, ಕೆಂಪಣ್ಣ, ರಾಜೇಶ್, ರಾಜೇಂದ್ರ, ಶ್ರೀಕಂಠಮೂರ್ತಿ, ಅಂಜನಿಸೋಮಣ್ಣ, ಕೃಷಿಕ ಸಮಾಜದ ಹೆಚ್.ಹನುಮಂತಪ್ಪ, ಬಿ.ಜಿ.ಸತೀಶ್‌ಬಾಬು, ಕೆ.ಜಿ.ಹಳ್ಳಿ ಗ್ರಾ.ಪಂ.ಅಧ್ಯಕ್ಷ ಎಸ್.ಆರ್.ಯಲ್ಲಪ್ಪ, ಗ್ರಾ.ಪಂ.ಸದಸ್ಯ ಎಂ.ಮುರುಗೇಶ, ಪ್ರಗತಿ ಶ್ರೀನಿವಾಸ್, ಶೆಟ್ಟಹಳ್ಳಿ ರಾಮಮೂರ್ತಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.