ಸಿನಿಮಾಸುದ್ದಿ

ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ ಇನ್ನಿಲ್ಲ

ಬೆಂಗಳೂರು: ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಅವರು ತಲೆ ಸುತ್ತಿ ಬಿದ್ದಿದ್ದು, ತಲೆಗೆ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನ ಆಸ್ಪತ್ರೆಗೆ ದಾಖಲಾಸಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೇ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಮ್ (83)ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ವಿದ್ಯಾಪೀಠ ಸರ್ಕಲ್​​ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಸ್ಕ್ಯಾನಿಂಗ್ ರಿಪೋರ್ಟ್​​​ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗಿರೋದು ಗೊತ್ತಾಗಿತ್ತು. ಇದರ ಬೆನ್ನಲ್ಲೇ ಸ್ಥಿತಿ ಗಂಭೀರವಾಗಿದ್ದರಿಂದ ಕೋಮಾಗೆ ಜಾರಿದ್ದರು. ಆದರೆ, ಮೂರು ದಿನಗಳ ಬಳಿಕ ಅವರು ಕೊನೆಯುಸಿರೆಳೆದಿದ್ದಾರೆ.

1958ರಿಂದ 1965ರವರೆಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಶಿವರಾಮ್​​ ಅವರು, ನಟ ಕಲ್ಯಾಣ ಕುಮಾರ್​​ ನಟನೆಯ ಬೆರೆತ ಜೀವ ಚಿತ್ರದಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿದ್ದರು. ಇದರ ಜೊತೆಗೆ ಶರಪಂಜರ, ನಾಗರಹಾವು, ಶುಭಮಂಗಳ, ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಸಬೆಳಕು, ಗುರುಶಿಷ್ಯರು, ಮಕ್ಕಳ ಸೈನ್ಯ, ಆಪ್ತಮಿತ್ರ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಇದರ ಜೊತೆಗೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಗೃಹಭಂಗ, ರವಿಕಿರಣ್​​​ ನಿರ್ದೇಶನದ ಬದುಕು ಧಾರಾವಾಹಿಯಲ್ಲಿ ಅಭಿನಯ ಮಾಡಿದ್ದಾರೆ.

ಪ್ರಮುಖವಾಗಿ ನಿರ್ದೇಶಕ ಕಣಗಾಲ್​​ ಪುಟ್ಟಣ್ಣ ಅವರೊಂದಿಗೆ ಶಿವರಾಮ್​​ ಅವರು ಕೆಲಸ ಮಾಡಿದ್ದರು. ಇವರಿಗೆ ಚಿತ್ರರಂಗದಲ್ಲಿ ಶಿವರಾಮಣ್ಣ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಡಾ. ರಾಜ್​ಕುಮಾರ್​​ ಕುಟುಂಬದೊಂದಿಗೆ ಶಿವರಾಮ್​ ಅವರು ವಿಶೇಷ ಸಂಬಂಧವಿಟ್ಟುಕೊಂಡಿದ್ದರು.

ಅಗಲಿದ ಹಿರಿಯ ನಟನ ನಿವಾಸಕ್ಕೆ ನಟ ಶಿವರಾಜ್​ ಕುಮಾರ್ ಭೇಟಿ ನೀಡಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಶಿವರಾಮಣ್ಣ ಎಂದ ತಕ್ಷಣ ಜ್ಞಾಪಕಕ್ಕೆ ಬರುವುದು ಶಬರಿಮಲೆ. ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ರೀತಿ ಇನ್ನೂ ನೆನಪಿಗೆ ಬರುತ್ತದೆ. ಅವರನ್ನು ನಾವು ಗುರುಸ್ವಾಮಿ ಆಗಿ ಸ್ವೀಕರಿಸಿದ್ದೆವು. ಅವರಲ್ಲಿ ಆ ಒಂದು ಚೈತನ್ಯವಿತ್ತು. ಮೂರ್ನಾಲ್ಕು ವರ್ಷಗಳ ಹಿಂದೆ ಶಬರಿಮಲೆ ಬೆಟ್ಟವನ್ನು ಆರಾಮವಾಗಿ ಹತ್ತಿದ್ದರು. ಇದು ಅವರ ಸಾಮರ್ಥ್ಯಕ್ಕೆ ಸಾಕ್ಷಿ. ಅವರು ರಾಜ್‌ ಕುಟುಂಬ ಅಂದ್ರೆ ಪ್ರೀತಿ ಅಭಿಮಾನವನ್ನು ಹೊಂದಿದ್ದರು. ಹತ್ತಿರವಾದರು ದೂರವಾಗುತ್ತಿದ್ದರೆ ಹೇಗೆ ನೋವು ತಡೆದುಕೊಳ್ಳಲು ಸಾಧ್ಯ. ಎಷ್ಟು ನೋವನ್ನು ತಡೆದುಕೊಳ್ಳಬಹುದು. ಶಿವರಾಮಣ್ಣ ನೀವಿಲ್ಲದಿದ್ದರೂ ನಿಮ್ಮ ನೆನಪು ಸದಾ ನಮ್ಮ ಜೊತೆ ಇರಲಿದೆ ಎಂದು ಭಾವುಕ ನುಡಿಗಳನ್ನಾಡಿದರು.

Related Articles

Leave a Reply

Your email address will not be published. Required fields are marked *

Back to top button