ಇತ್ತೀಚಿನ ಸುದ್ದಿ

ಕಣ್ಣಿನ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಡಾ.ಹೆಚ್.ಸಿ.ಮಹದೇವಪ್ಪ

ಮೈಸೂರು,: ಮೈಸೂರು ರೇಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್, ಸಿದ್ದಾರ್ಥನಗರ ಕಣ್ಣಿನ ಆಸ್ಪತ್ರೆ ವತಿಯಿಂದ ಕ್ಲಬ್ ಹೌಸ್ ಸದಸ್ಯರಿಗೆ ಹಾಗೂ ಸಿಬ್ಬಂದಿಗೆ ರೇಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರಕ್ಕೆ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವರು, ಕಣ್ಣಿನ ತಪಾಸಣೆಯು ಒಳ್ಳೆಯ ಕಾರ್ಯಕ್ರಮವಾಗಿದೆ. ಕಣ್ಣಿನ ಪೊರೆ ಸಮಸ್ಯೆ ಸಾಮಾನ್ಯವಾಗಿ ನಾಲ್ವತ್ತು ವರ್ಷ ದಾಟಿದ ಮೇಲೆ ಕೆಲವರಿಗೆ ಬರುತ್ತದೆ. ಅದನ್ನು ಸೂಕ್ತ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು. ಅಂಧತ್ವ ನಿವಾರಣೆಗೆ ಸರ್ಕಾರದ ವತಿಯಿಂದಲೂ ಅನೇಕ ಸೌಲಭ್ಯಗಳಿವೆ ಎಂದು ಹೇಳಿದರು.

ಪ್ರತಿಯೊಬ್ಬರೂ ಆರೋಗ್ಯದಲ್ಲಿ ಸಮತೋಲನತೆ ಕಾಯ್ದುಕೊಳ್ಳಬೇಕು. ಅನೇಕ ಕಾಯಿಲೆಗಳು ಕಣ್ಣಿನ ದೃಷ್ಟಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ದೀಪಾವಳಿ ಸಂದರ್ಭದಲ್ಲಿ ಅನೇಕ ಮಕ್ಕಳು ಕಣ್ಣಿನ ತೊಂದರೆಗೆ ಸಿಲುಕುತ್ತಾರೆ. ಅತ್ಯಂತ ಎಚ್ಚರಿಕೆಯಿಂದ ಪಟಾಕಿ ಹಚ್ಚಬೇಕು ಎಂದು ಸಲಹೆ ನೀಡಿದರು.

ಅಂಧತ್ವ ನಿವಾರಣೆಗೆ ಸರ್ಕಾರದ ಜೊತೆಗೆ ಸಂಘ ಸಂಸ್ಥೆಗಳು ಸಹ ಕೈಜೋಡಿಸಬೇಕು. ಕಾಲಕಾಲಕ್ಕೆ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಬಡವರಿಗೆ ನೆರವಾಗಬೇಕು. ಅದರಂತೆ ಎಂ.ಆರ್.ಸಿ ಸೇವಾಮನೋಭಾವದೊಂದಿಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎಂ.ಆರ್‌.ಸಿ ಕಣ್ಣಿನ ಆಸ್ಪತ್ರೆಯು ಜಿಲ್ಲಾ ಅಂಧತ್ವ ನಿಯಂತ್ರಣ ಸಂಘಗಳು, ರೋಟರಿ ಮತ್ತು ಲಯನ್ಸ್ ಕಬ್ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಹಮ್ಮಿಕೊಂಡಿದೆ. ಇಲ್ಲಿಯವರೆಗೆ ಆಸ್ಪತ್ರೆಯು ಸುಮಾರು 2000 ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಿದೆ 12 ಲಕ್ಷ ರೋಗಿಗಳನ್ನು ಪರೀಕ್ಷಿಸಿದೆ. 90 ಸಾವಿರ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ್ದು, ಅದರಲ್ಲಿ 50 ಸಾವಿರ ಉಚಿತ ಶಸ್ತ್ರ ಚಿಕಿತ್ಸೆಗಳಾಗಿವೆ ಎಂದು ಮಾಹಿತಿ ನೀಡಿದರು‌.

ಜನಸೇವೆ ಮಾಡಿದವರ ಮನಸ್ಸು ಯಾವಾಗಲೂ ಉಲ್ಲಾಸಭರಿತವಾಗಿರುತ್ತದೆ. ಪ್ರತಿನಿತ್ಯ ಲವಲವಿಕೆಯಿಂದ ಕೂಡಿರುತ್ತದೆ. ಎಲ್ಲರೂ ತಮ್ಮದೇ ಸಾಮಾಜಿಕ ಜವಾಬ್ದಾರಿಯಿಂದ ಜನರಿಗೆ ಸಹಾಯ ಮಾಡಬೇಕು. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಮಿಡಿಯಬೇಕು ಎಂದು ಹೇಳಿದರು‌.

ಕಾರ್ಯಕ್ರಮದಲ್ಲಿ ಮೈಸೂರು ರೇಸ್ ಕ್ಲಬ್ ಅಧ್ಯಕ್ಷರಾದ ಕೆ.ಎಂ.ಚಂದ್ರೇಗೌಡ, ಕೈಗಾರಿಕೋದ್ಯಮಿ ಆರ್.ಗುರು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕುಮಾರಸ್ವಾಮಿ, ಡಾ.ಬೃಂದಾ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button