ದೇಶ

ಒಮಿಕ್ರಾನ್ ವೈರಸ್‌ನ ಆತಂಕ: ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದ‌ ಪ್ರಧಾನಿ ಮೋದಿ

 ದೇಶಾದ್ಯಂತ ಕರೋನಾವೈರಸ್ ಹೊಸ ರೂಪಾಂತರ ಒಮಿಕ್ರಾನ್ ವೈರಾಣು ಆತಂಕ ಸೃಷ್ಟಿಯಾಗಿದ್ದು ಕೋವಿಡ್-19 ಪ್ರಕರಣಗಳು ಪ್ರತಿನಿತ್ಯ ಏರಿಕೆಯಾಗುತ್ತಲೇ ಇದೆ. ಈ ಹಿನ್ನಲೆಯಲ್ಲಿ ಕರೋನಾ ಮೂರನೇ ಅಲೆಯನ್ನು ತಡೆಯಲು ಹಾಗೂ ಸರ್ಕಾರಗಳ ತಯಾರಿಯ ಬಗ್ಗೆ ಪರಿಶೀಲಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಕರೆದಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗುತ್ತಾರೆ. ಈ ಸಂದರ್ಭದಲ್ಲಿ ಕರೋನಾವೈರಸ್ (Coronavirus) ಅನ್ನು ತಡೆಗಟ್ಟಲು ಯಾವ ರಾಜ್ಯಗಳಲ್ಲಿ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂಬ  ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚರ್ಚೆ ನಡೆಸಲಿದ್ದಾರೆ.

ದೇಶದಲ್ಲಿ ಮೂರನೇ ಅಲೆ (Corona Third Wave) ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಸಿಎಂಗಳ ಜೊತೆಗೆ ಸಭೆ‌ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇಂದು ಸಂಜೆ 4:30ಕ್ಕೆ ನಡೆಯುವ ವಿಡಿಯೋ ಸಂವಾದದಲ್ಲಿ ಕರ್ನಾಟಕದ ತಯಾರಿಯ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. 

ಮೂಲಗಳ ಪ್ರಕಾರ, ಲಸಿಕಾ ಅಭಿಯಾನದ ಸ್ಥಿತಿಗತಿಯ ಬಗ್ಗೆ ಮಾಹಿತಿ ಕೇಳಲಿರುವ ಪ್ರಧಾನಿ ಕೋವಿಡ್ ಲಸಿಕೆಯ ಜಾಗೃತಿ ಹಾಗೂ ಪೂರ್ಣ ಪ್ರಮಾಣದ ಲಸಿಕಾಕರಣದ ಬಗ್ಗೆ ವಿವರಣೆ ಪಡೆಯಲಿದ್ದಾರೆ. ಇದರ ಜತೆಗೆ ಬೂಸ್ಟರ್ ಡೋಸ್ (Booster Dose) ಬಗ್ಗೆ ಹೆಚ್ಚಿನ ನಿಗಾ ವಹಿಸಲು ಮುಖ್ಯಮಂತ್ರಿಗಳಿಗೆ ಸೂಚನೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದೇ ವೇಳೆ ಕರೋನಾ ಮೂರನೇ ಅಲೆಯನ್ನು ಎದುರಿಸಲು ರಾಜ್ಯಗಳು ಯಾವ ರೀತಿ  ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂಬ ಬಗ್ಗೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಮಾಲೋಚನೆ ನಡೆಸಲಿರುವ ಪ್ರಧಾನಿ ಮೋದಿ, ಆಸ್ಪತ್ರೆಯ ವ್ಯವಸ್ಥೆ, ಬೆಡ್, ಆಕ್ಸಿಜನ್ ಹಾಗೂ ಕೋವಿಡ್ ಚಿಕಿತ್ಸೆಗೆ ಬೇಕಾಗುವ ಔಷಧಿ ಲಭ್ಯತೆ ಬಗ್ಗೆ ಕೂಡ ಮಾಹಿತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Related Articles

Leave a Reply

Your email address will not be published. Required fields are marked *

Back to top button