ಒತ್ತುವರಿಯಾಗಿದ್ದ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನು ತೆರವು
ದೇವನಹಳ್ಳಿ, ಜನವರಿ 05: ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದೆ ಲೋಕಾಯುಕ್ತಕ್ಕೆ ವರದಿ ಕೇಸ್ಗೆ ಸಂಬಂಧಿಸಿದಂತೆ ಟಿವಿ9 ವರದಿಯಿಂದ ಎಚ್ಚೆತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕು ಆಡಳಿತ ಒತ್ತುವರಿಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನು ತೆರವು ಮಾಡಲಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿ ಗ್ರಾಮದ ವಡ್ಡರಹಳ್ಳಿ ಸರ್ವೆ ನಂಬರ್ 162ರಲ್ಲಿನ ಸರ್ಕಾರಿ ಗೋಮಾಳ ಜಮೀನನ್ನು ಆರ್‌ಐ ಶಿವಪ್ರಸಾದ್ ನೇತೃತ್ವದಲ್ಲಿ ಜೆಸಿಬಿಯಿಂದ ತೆರವು ಮಾಡಲಾಗಿದೆ. ಸರ್ವೆ ನಂ.162ರಲ್ಲಿನ ಸಂಪೂರ್ಣ ಒತ್ತುವರಿ ತೆರವಿಗೆ ಅಧಿಕಾರಿಗಳು ಸಜ್ಜಾಗಿದ್ದಾರೆ.
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದೆ ಲೋಕಾಯುಕ್ತಕ್ಕೆ ತಹಶೀಲ್ದಾರ್, ಆರ್‌ಐ ಸುಳ್ಳು ವರದಿ ನೀಡಿದ ಆರೋಪ ಕೇಳಿಬಂದಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ವಡ್ಡರಹಳ್ಳಿ ಬಳಿ ಒತ್ತುವರಿಯಾಗಿರುವ ಜಮೀನು ಬಳಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು.
ಈ ಹಿಂದೆ ದೊಡ್ಡಬಳ್ಳಾಪುರ ತಹಶೀಲ್ದಾರ್ ಆಗಿದ್ದ ಮೋಹನ್ ಕುಮಾರಿ, ಆರ್‌ಐ ಶಿವಪ್ರಸಾದ್ ಲೋಕಾಯುಕ್ತಕ್ಕೆ ಸುಳ್ಳು ವರದಿ ನೀಡಿರುವ ಆರೋಪ ಮಾಡಲಾಗಿದೆ. ಇಬ್ಬರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಗ್ರಾಮಸ್ಥರಿಂದ ಪ್ರತಿಭಟನೆ ಮಾಡಲಾಗಿದೆ.
ಸುಳ್ಳು ವರದಿ ಸಲ್ಲಿಕೆ ಬಗ್ಗೆ ಲೋಕಾಯುಕ್ತಕ್ಕೂ ಗ್ರಾಮಸ್ಥರು ದೂರು ನೀಡಿದ್ದು, ಒತ್ತುವರಿ ತೆರವು ಮಾಡಿ ಗ್ರಾಮಸ್ಥರಿಗೆ ಸೈಟ್ ನೀಡುವಂತೆ ಒತ್ತಾಯ ಮಾಡಲಾಗಿದೆ. ವಡ್ಡರಹಳ್ಳಿಯ ಸರ್ವೆ ನಂಬರ್ 162ರಲ್ಲಿ 7ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ದೂರಿನನ್ವಯ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಲಾಗಿತ್ತು. ಈ ವೇಳೆ ಒತ್ತುವರಿ ತೆರವು ಮಾಡಿ ಬೋರ್ಡ್ ಹಾಕಿರುವುದಾಗಿ ಸುಳ್ಳು ವರದಿ ಸಲ್ಲಿಸಿದ್ದಾರೆಂದು ಗ್ರಾಮಸ್ಥರು ಆರೋಪ ಮಾಡಿದ್ದರು.