ಐಪಿಎಲ್-2021: ರಾಜಸ್ಥಾನ ರಾಯಲ್ಸ್ ವಿರುದ್ಧ ಆರ್ ಸಿಬಿಗೆ 7 ವಿಕೆಟ್ ಗಳ ಭರ್ಜರಿ ಜಯ
ದುಬೈ: ದುಬೈ ನಲ್ಲಿ ನಡೆದ 43 ನೇ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ 7 ವಿಕೆಟ್ ಗಳ ಜಯ ಗಳಿಸಿದೆ.
ಈ ಪಂದ್ಯವನ್ನು ಸೋತಿರುವುದರಿಂದ ರಾಜಸ್ಥಾನ ರಾಯಲ್ಸ್ ತಂಡದ ಪ್ಲೇ ಆಫ್ ಕನಸು ಕ್ಷೀಣಿಸಿದೆ. ಇನ್ನು ಪಂದ್ಯವನ್ನು ಗೆದ್ದಿರುವ ಆರ್ ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದು ಪ್ಲೇ ಆಫ್ ಗೆ ಹೋಗುವುದು ಬಹುತೇಕ ಖಚಿತಗೊಂಡಿದೆ.
ಆರ್ ಆರ್- ಆರ್ ಸಿಬಿ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಆರ್ ಸಿಬಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಅತ್ಯುತ್ತಮ ಆರಂಭ ಲಭಿಸಿತು.
ಎವಿನ್ ಲೂಯಿಸ್ (37 ಎಸೆತಗಳಲ್ಲಿ 58 ರನ್) ಹಾಗೂ ಯಶಸ್ವಿ ಜೈಸ್ವಾಲ್ (22 ಎಸೆತಗಳಲ್ಲಿ 31 ರನ್) ಗಳಿಸಿ ತಂಡಕ್ಕೆ ಉತ್ತಮ ಆರಂಭವನ್ನೇನೋ ನೀಡಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಲೈನ್ ಕುಸಿತದ ಪರಿಣಾಮ ಆರ್ ಆರ್ ಹೆಚ್ಚಿನ ರನ್ ಗಳಿಸಲು ಸಾಧ್ಯವಾಗದೇ 20 ಓವರ್ ಗಳಲ್ಲಿ 9 ವಿಕೆಟ್ ಗಳ ನಷ್ಟಕ್ಕೆ 149 ರನ್ ಗಳಿಸಿತು.
ಸಾಧಾರಣ ರನ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ ತಂಡ 17.1 ಓವರ್ ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಪಂದ್ಯ ಗೆದ್ದಿದೆ.
ಆರ್ ಸಿಬಿ ಪರ ವಿರಾಟ್ ಕೊಹ್ಲಿ (20 ಎಸೆತಗಳಲ್ಲಿ 25) ದೇವದತ್ ಪಡಿಕ್ಕಲ್ (17 ಎಸೆತಗಳಲ್ಲಿ 22 ರನ್) ಶ್ರೀಕಾಂತ್ ಭರತ್ (35 ಎಸೆತಗಳಲ್ಲಿ 44 ರನ್) ಗ್ಲೆನ್ ಮ್ಯಾಕ್ಸ್ ವೆಲ್ 30 ಎಸೆತಗಳಲ್ಲಿ 50 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪ್ಲೇ ಆಫ್ ಸಂಭಾವ್ಯ ತಂಡಗಳು:
ಸಿಎಸ್ ಕೆ ಹಾಗೂ ಡೆಲ್ಲಿ ತಂಡಗಳು ಈಗಾಗಲೇ ಮೊದಲೆರಡು ಸ್ಥಾನಗಳಲ್ಲಿದ್ದು ಪ್ಲೇ ಆಫ್ ಗೆ ಖಚಿತಗೊಂಡಿವೆ. ಈಗ ಆರ್ ಸಿಬಿ 3 ನೇ ಸ್ಥಾನದಲ್ಲಿದ್ದರೂ, ರನ್ ರೇಟ್ ಕಡಿಮೆ ಇರುವುದರಿಂದ ಪ್ಲೇ ಆಫ್ ನ ಕನಸು ನನಸಾಗಬೇಕಾದರೆ ಬಾಕಿ ಇರುವ 3 ಪಂದ್ಯಗಳ ಪೈಕಿ 1 ಪಂದ್ಯವನ್ನು ಅಗತ್ಯವಾಗಿ ಗೆಲ್ಲಲೇಬೇಕಿದೆ.