ಐಪಿಎಲ್ ಹರಾಜಿಗೆ ತಡೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಐಪಿಎಲ್ ಕ್ರಿಕೆಟ್ ಟೂರ್ನಿಗೆ ಆಟಗಾರರನ್ನು ಹರಾಜು ಹಾಕುವುದಕ್ಕೆ ತಡೆ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಶೆಟ್ಟಿ ಸಲ್ಲಿಕೆ ಮಾಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಅನ್ನು ಹೈಕೋರ್ಟ್ ವಜಾಗೊಳಿಸಿದೆ. ಆಟಗಾರರನ್ನು ಹರಾಜು ಹಾಕುವುದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ಅರ್ಜಿ ಪುರಸ್ಕರಿಸಲು ಆಗದು ಎಂದು ಅರ್ಜಿ ವಜಾಗೊಳಿಸಿತು.
ಐಪಿಎಲ್ ಟೂರ್ನಿ ಈಗಾಗಲೇ ಮುಕ್ತಾಯಗೊಂಡು, ಗೆದ್ದ ತಂಡಕ್ಕೆ ಟ್ರೋಫಿಯನ್ನು ಹಂಚಲಾಗಿದೆ. ಅಂತೆಯೇ ಐಪಿಎಲ್‌ಗೆ ಹರಾಜು ಪ್ರಕ್ರಿಯೆ ಸಹ ಮುಕ್ತಾಯಗೊಂಡಿದೆ. ಇಂತಹ ಪಿಐಎಲ್ ಅನ್ನು ಸಹ ದೆಹಲಿ ಹೈಕೋರ್ಟ್ ವಜಾಗೊಳಿಸಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.
ಅಮಿತ್ ಶಾ, ಗಂಗೂಲಿ ಪ್ರತಿವಾದಿಗಳು; ವೆಂಕಟೇಶ್ ಶೆಟ್ಟಿ ತಮ್ಮ ಪಿಐಎಲ್‌ನಲ್ಲಿ ಆಟಗಾರರನ್ನು ವಸ್ತುಗಳ ಹಾಗೆ ಐಪಿಎಲ್ ಟೂರ್ನಿಗೆ ಹರಾಜು ಹಾಕುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಹರಾಜು ಹಾಕುವುದು ಕಾನೂನು ಬಾಹಿರ ಎಂದು ಹೇಳಿದ್ದರು.
ಇಂತಹ ಹರಾಜು ಪ್ರಕ್ರಿಯೆ ಮುನುಷ್ಯರ ಘನತೆಗೆ ಧಕ್ಕೆ ತರುತ್ತದೆ. ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. ಆಟಗಾರರ ಹರಾಜಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.
ತಮ್ಮ ಅರ್ಜಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಕೋಲ್ಕತ್ತ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್ ಸೇರಿದಂತೆ ಐಪಿಎಲ್ ತಂಡಗಳ ಮಾಲೀಕರು ಹಾಗೂ ಬಿಸಿಸಿಐ ಪದಾಧಿಕಾರಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು.
25 ಸಾವಿರ ರೂ. ದಂಡ ಹಾಕಿದ್ದ ಕೋರ್ಟ್; ದೆಹಲಿ ಹೈಕೋರ್ಟ್‌ಗೆ ಸಹ ಐಪಿಎಲ್ ಹರಾಜಿಗೆ ತಡೆ ನೀಡಬೇಕು ಎಂದು ವ್ಯಕ್ತಿಯೊಬ್ಬ ಪಿಐಎಲ್ ಸಲ್ಲಿಕೆ ಮಾಡಿದ್ದ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿ ವಜಾಗೊಳಿಸಿ ವ್ಯಕ್ತಿಗೆ 25 ಸಾವಿರ ರೂ. ದಂಡ ಹಾಕಿತ್ತು.
ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಿ. ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಸಿ. ಹರಿಶಂಕರ್ ಇದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ ಪ್ರಚಾರ ಪಡೆಯುವ ಅರ್ಜಿ ಎಂದು ಅಭಿಪ್ರಾಯಪಟ್ಟಿದ್ದರು.
ಸುಧೀರ್ ಶರ್ಮಾ ಅರ್ಜಿಯಲ್ಲಿ ಆಟಗಾರರನ್ನು ಹರಾಜು ಹಾಕುವುದು ಭ್ರಷ್ಟಾಚಾರಕ್ಕೆ ಕಾರಣವಾಗುತ್ತದೆ. ಇದೊಂದು ಮಾನವ ಕಳ್ಳಸಾಗಣೆಯಂತಹ ಪ್ರಕರಣ ಎಂದು ಉಲ್ಲೇಖಿಸಿದ್ದರು. ಆದರೆ ಕೋರ್ಟ್ ಆಟಗಾರರು ತಂಡದ ಪರವಾಗಿ ಆಡುವುದು ಅವರ ವೈಯಕ್ತಿಕ ಆಯ್ಕೆ ಎಂದು ಹೇಳಿತ್ತು.