ಇತ್ತೀಚಿನ ಸುದ್ದಿದೇಶಸುದ್ದಿ

ಏಳು ದಿನಗಳವರೆಗೂ ಬಾಹ್ಯಾಕಾಶದಲ್ಲೇ ಸಂಚಾರ..!

ಭಾರತದಲ್ಲಿ ಈಗಾಗಲೇ ವಿಳಂಬವಾಗಿರುವ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನವು 2023ರಲ್ಲಿ ಉಡಾವಣೆಗೆ ಸಜ್ಜಾಗಿದೆ ಎಂದು ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಕಳೆದ 2021ರ ಡಿಸೆಂಬರ್ ವೇಳೆಯಲ್ಲಿಯೇ ಬಾಹ್ಯಾಕಾಶ ಯಾನವನ್ನು ಆರಂಭಿಸಬೇಕಿದ್ದು, ಕಾರಣಾಂತರಗಳಿಂದ ಅದು ವಿಳಂಬವಾಗಿತ್ತು. ಆದರೆ 2023ರಲ್ಲಿ ಗಗನಯಾನ ಮಿಷನ್ ಅಡಿಯಲ್ಲಿ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ಈ ಮಿಷನ್‌ಗೆ ಸಂಬಂಧಿಸಿದ ಎರಡು ಮಾನವರಹಿತ ಪ್ರಯೋಗಗಳನ್ನು 2022ರ ವರ್ಷದ ಅಂತ್ಯದೊಳಗೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗು ಮತ್ತು ನಿರ್ಬಂಧಗಳಿಂದಾಗಿ ಗಗನ ಯಾನ ಮಿಷನ್ ಕೊಂಚ ವಿಳಂಬವಾಯಿತು.

ಆದರೆ 2023ರಲ್ಲಿ ಈ ಮಿಷನ್ ಅನ್ನು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಮುಂದಿನ ವರ್ಷದ ವೇಳೆಗೆ ಒಬ್ಬರು ಅಥವಾ ಇಬ್ಬರು ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು. ಇದು ಯಶಸ್ವಿಯಾದರೆ, ಬಾಹ್ಯಾಕಾಶ ವಲಯದಲ್ಲಿ ಸಾಧನೆಗೈದಿರುವ ಯುನೈಟೆಡ್ ಸ್ಟೇಟ್ಸ್, ಚೀನಾ ಮತ್ತು ರಷ್ಯಾದಂತಹ ರಾಷ್ಟ್ರಗಳ ಎಲೈಟ್ ಕ್ಲಬ್‌ಗೆ ಭಾರತವೂ ಸೇರುತ್ತದೆ.

ಮೂರು ಹಂತಗಳಲ್ಲಿ ಪ್ರಾಯೋಗಿಕ ಪರೀಕ್ಷೆ ಹೇಗಿರುತ್ತೆ?

ಮೊದಲ ಪ್ರಯೋಗವು ಮಾನವರಹಿತವಾಗಿರುತ್ತದೆ. ಎರಡನೇ ಪ್ರಯೋಗದಲ್ಲಿ ವ್ಯೋಮಿತ್ರ ಎಂಬ ಹೆಸರಿನ ಮಹಿಳಾ ರೋಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ವ್ಯೋಮಿತ್ರ ಹೆಸರಿನ ರೋಬೋಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಭಿವೃದ್ಧಿಪಡಿಸಿದೆ. ಎರಡೂ ಪ್ರಯೋಗಗಳನ್ನು 2022ರ ಅಂತ್ಯದ ವೇಳೆಗೆ ಮಾಡಲಾಗುತ್ತದೆ. ಈ ಮಿಷನ್ ಯಶಸ್ವಿಯಾದ ನಂತರವೇ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುತ್ತದೆ. ಮೂರನೇ ಹಂತದಲ್ಲಿ ಗಗನ ಯಾನ ಮಿಷನ್ 2023 ಅಡಿಯಲ್ಲಿ ಇಬ್ಬರು ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಹೇಳಿದ್ದಾರೆ.

ಏಳು ದಿನಗಳವರೆಗೂ ಬಾಹ್ಯಾಕಾಶದಲ್ಲೇ ಸಂಚಾರ

ಭಾರತವು 2023ರಲ್ಲಿ ನಡೆಸುವ ಗಗನ ಯಾನ ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ಇಬ್ಬರು ಮನುಷ್ಯರನ್ನು ಕಳುಹಿಸಲಾಗುತ್ತದೆ. ಬಾಹ್ಯಾಕಾಶಕ್ಕೆ ಹಾರಲಿರುವ ಇಬ್ಬರು ಮಾನವರು ಮುಂದಿನ ಏಳು ದಿನಗಳವರೆಗೂ ಅಲ್ಲಿಯೇ ಸಂಚಾರ ನಡೆಸಲಿದ್ದಾರೆ. ಬಾಹ್ಯಾಕಾಶ ಸಂಚಾರಕ್ಕೂ ಪೂರ್ವದಲ್ಲಿ ಇಂಥ ಪ್ರಯೋಗಗಳನ್ನು ನಡೆಸಿದ ರಾಷ್ಟ್ರಗಳಲ್ಲಿ ಭಾರತೀಯ ವಾಯುಪಡೆಯ ಸಿಬ್ಬಂದಿಗೆ ತರಬೇತಿಯನ್ನು ಸಹ ನೀಡಲಾಗುತ್ತಿದೆ.

ಭಾರತೀಯ ಪೈಲಟ್‌ಗಳಿಗೆ ರಷ್ಯಾದಲ್ಲಿ ತರಬೇತಿ

ಮುಂಬರುವ 2023ರ ಮಾನವ ಸಹಿತ ಗಗನ ಯಾನ ಮಿಷನ್ ಬಾಹ್ಯಾಕಾಶ ಯೋಜನೆಯ ಹಿನ್ನೆಲೆಯಲ್ಲಿ ಭಾರತದ ವಾಯುಪಡೆ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯ ಇಬ್ಬರು ಪೈಲಟ್‌ಗಳನ್ನು ರಷ್ಯಾದ ಬಾಹ್ಯಾಕಾಶ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಅವರಿಗೆ ಬೆಂಗಳೂರಿನ ಗಗನಯಾನ ಮಾಡ್ಯೂಲ್‌ನಲ್ಲಿ ತರಬೇತಿ ನೀಡಲಾಗುವುದು. ಈ ಗಗನಯಾತ್ರಿಗಳನ್ನು ಗಗನಾಟ್ಸ್ ಎಂದು ಕರೆಯಲಾಗುತ್ತದೆ.

ಕೆಂಪುಕೋಟೆಯಲ್ಲಿ ಗಗನ ಯಾನ್ ಮಿಷನ್ ಘೋಷಿಸಿದ್ದ ಪ್ರಧಾನಿ

ಕಳೆದ 2018ರ ಆಗಸ್ಟ್ 15ರಂದು ನವದೆಹಲಿಯ ಕೆಂಪುಕೋಟೆಯ ಮೇಲೆ ನಿಂತು ಪ್ರಧಾನಮಂತ್ರಿ ನರೇಂದ್ರ ಮೋದಿ ಈ ಗಗನ ಯಾನ ಮಿಷನ್ ಅನ್ನು ಘೋಷಿಸಿದ್ದರು. ಅಲ್ಲದೇ 2023ಕ್ಕೆ ನಿಗದಿ ಆಗಿರುವ ಈ ಯೋಜನೆಗಾಗಿ ಕೇಂದ್ರ ಸರ್ಕಾರದಿಂದ ಬರೋಬ್ಬರಿ 10,000 ಕೋಟಿ ಕೂಪಾಯಿ ಅನ್ನು ಘೋಷಿಸಲಾಗಿತ್ತು.

Related Articles

Leave a Reply

Your email address will not be published. Required fields are marked *

Back to top button