ನವ ದೆಹಲಿ (ಅಕ್ಟೋಬರ್ 16); ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ನು ಇತ್ತೀಚೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಖ್ಯಾತ ಆರ್ಥಿಕ ತಜ್ಞರೂ ಆಗಿರುವ ಮನಮೋಹನ್ ಸಿಂಗ್ ಶೀಘ್ರದಲ್ಲಿ ಗುಣಮುಖರಾಗಬೇಕು ಎಂದು ಇಡೀ ದೇಶ ಹಾರೈಸುತ್ತಿದೆ. ವಿಶ್ವನಾಯಕರೂ ಸಹ ಮನಮೋಹನ್ ಸಿಂಗ್ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದಾರೆ.
ಆದರೆ, ನವದೆಹಲಿಯಲ್ಲಿನ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS)ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ನೋಡಲು ಬಂದ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಅವರ ವರ್ತನೆಗೆ ಸಿಂಗ್ ಅವರ ಪುತ್ರಿ ದಮನ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆಗೆ ಪೋಟೋಗ್ರಾಫರ್ ಜೊತೆ ತೆರಳಿದ ಸಚಿವ ಮಾಂಡವೀಯ:
“ಏಮ್ಸ್ನಲ್ಲಿ ರೋಗಿಗಳು ದಾಖಲಾಗಿರುವ ಕೋಣೆಯ ಒಳಗೆ ಪೋಟೋ ತೆಗೆಯುವುದು ನಿಷಿದ್ಧ. ಆದರೆ, ಮನಮೋಹನ್ ಸಿಂಗ್ ಅವರ ಆರೋಗ್ಯ ವಿಚಾರಿಸಲು ಗುರುವಾರ ಏಮ್ಸ್‌ಗೆ ಆಗಮಿಸಿದ್ದ ಸಚಿವ ಮಾಂಡವೀಯಯ ಅವರು ಕುಟುಂಬದ ಅನುಮತಿಗೆ ವಿರುದ್ಧವಾಗಿ ಫೋಟೋಗ್ರಾಫರ್‌ನನ್ನು ಸಹ ಕೊಠಡಿಯ ಒಳಗೆ ಕರೆದುಕೊಂಡು ಹೋಗಿ ಪೋಟೋ ತೆಗೆದುಕೊಂಡಿದ್ದಾರೆ” ಎಂದು ದಮನ್ ಸಿಂಗ್ ಆರೋಪಿಸಿದ್ದಾರೆ.