ಇತ್ತೀಚಿನ ಸುದ್ದಿರಾಜಕೀಯ

ಉದ್ಯೋಗವಿರಲಿ ಕೊಬ್ಬರಿ ಮಿಠಾಯಿ ಕೂಡ ನೀಡಲಿಲ್ಲ: ಯು.ಕಾಂ. ಅಧ್ಯಕ್ಷ. ನಲಪಾಡ್‌ 

ಚಿತ್ರದುರ್ಗ: ಅಧಿಕಾರಕ್ಕೆ ಏರಿದರೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ನೀಡಿದ್ದ ನರೇಂದ್ರ ಮೋದಿ, ಏಳು ವರ್ಷಗಳಲ್ಲಿ 14 ಕೋಟಿ ಉದ್ಯೋಗ ನೀಡಬೇಕಿತ್ತು. ಯುವಸಮೂಹಕ್ಕೆ ಉದ್ಯೋಗವಿರಲಿ ಕೊಬ್ಬರಿ ಮಿಠಾಯಿ ಕೂಡ ನೀಡಲಿಲ್ಲ ಎಂದು ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ಹ್ಯಾರಿಸ್‌ ನಲಪಾಡ್‌ ವ್ಯಂಗ್ಯವಾಡಿದರು.

ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಯುವ ಕಾಂಗ್ರೆಸ್‌ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ಯುವಕ್ರಾಂತಿ’ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘2014ರಲ್ಲಿ ಜನರನ್ನು ಮೋಡಿ ಮಾಡಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ನಿರುದ್ಯೋಗದ ಸಮಸ್ಯೆ ಹೆಚ್ಚಾಗುತ್ತಿದೆ. ಪದವೀಧರ ಯುವ ಸಮೂಹ ನಿರುದ್ಯೋಗಿಗಳಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ವಿದ್ಯಾವಂತ ಯುವ ಸಮೂಹಕ್ಕೆ ಪಕೋಡ ಮಾರಾಟ ಮಾಡುವಂತೆ ಪ್ರಧಾನಿ ಸಲಹೆ ನೀಡಿದ್ದಾರೆ’ ಎಂದು ಕಿಡಿಕಾರಿದರು.

‘ದೇಶದ ಬಗ್ಗೆ ನೈಜ ಕಾಳಜಿ ಇರುವುದು ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ. ಅಧಿಕಾರಕ್ಕೆ ಬಂದಾಗ ಜನಪರ ಆಡಳಿತ ನೀಡುವುದು ಕಾಂಗ್ರೆಸ್‌ ಪಕ್ಷದ ಧ್ಯೇಯ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ಗೆ ಆಡಳಿತದ ಅನುಭವವಿದೆ. ಇತಿಹಾಸ ತಿರುಚುವ ಹಾಗೂ ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಬದಲಾವಣೆ ಮಾಡುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ. ದೇಶವನ್ನು ಅಂಬಾನಿ ಹಾಗೂ ಅದಾನಿ ಅವರಿಗೆ ಒತ್ತೆ ಇಡುತ್ತಿದೆ’ ಎಂದರು.

‘ದೇಶದಲ್ಲಿರುವ ಬಹುತೇಕ ಜಲಾಶಯಗಳು ಕಾಂಗ್ರೆಸ್‌ ಅಧಿಕಾರವಧಿಯಲ್ಲಿ ನಿರ್ಮಾಣವಾಗಿವೆ. ಕಾವೇರಿ ನದಿ ನೀರಿಗೆ ಮೇಕೆದಾಟು ಸಮೀಪ ಜಲಾಶಯ ನಿರ್ಮಿಸುವ ಯೋಜನೆ ಸಿದ್ಧವಾಗಿದ್ದು ಕೂಡ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸರಿಯಾದ ರೀತಿಯಲ್ಲಿ ಬೆಂಬಲ ಸಿಗಲಿಲ್ಲ’ ಎಂದು ದೂರಿದರು.

‘ದೇಶದ ಸಂವಿಧಾನಕ್ಕೆ ಆಪತ್ತು ಎದುರಾಗಿದೆ. ಇದನ್ನು ರಕ್ಷಣೆ ಮಾಡುವ ಕಾರ್ಯವನ್ನು ಯುವಸಮೂಹ ಮಾಡಬೇಕಿದೆ. ರಾಜಕಾರಣ ಉದ್ಯಮದಂತೆ ಗೋಚರವಾಗುತ್ತಿದೆ. ರಾಜಕೀಯ ಖಂಡಿತ ಇದೊಂದು ಉದ್ಯಮವಲ್ಲ. ಸೇವಾ ಕ್ಷೇತ್ರವಾಗಿ ಉಳಿಯಬೇಕು. ಬದ್ಧತೆಯಿಂದ ಕೆಲಸ ಮಾಡಬೇಕು. ಹಿರಿಯರ ಸಲಹೆ ಪಡೆದು ಎಲ್ಲರೂ ಒಗ್ಗೂಡಿ ಕೆಲಸ ಮಾಡಬೇಕು. ಪಕ್ಷದ ಮುಖಂಡರಿಗೆ ಅಗೌರವ ತೋರುವ ನಡವಳಿಕೆ ಸಲ್ಲದು’ ಎಂದರು.

ಮಾಜಿ ಶಾಸಕ ಉಮಾಪತಿ, ವಿಧಾನಪರಿಷತ್‌ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್‌, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ನಂದಿನಿಗೌಡ, ಕಾಂಗ್ರೆಸ್‌ ಮುಖಂಡರಾದ ಬಿ.ಸೋಮಶೇಖರ್‌, ಸವಿತಾ ರಘು, ಆನಂದ್‌, ಸಂಪತ್‌ಕುಮಾರ್‌, ಮೈಲಾರಪ್ಪ ಇದ್ದರು.

Related Articles

Leave a Reply

Your email address will not be published. Required fields are marked *

Back to top button