ದೇಶ

ಉದ್ಯೋಗದ ಹೆಸರಿನಲ್ಲಿ ಜೀವನದ ಹಕ್ಕುಉಲ್ಲಂಘನೆಗೆ ಆಸ್ಪದ ಬೇಡ -ಸುಪ್ರೀಂ

ನವದೆಹಲಿ (ಪಿಟಿಐ): ಪಟಾಕಿಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಪರಿಗಣಿಸುವಾಗ ಉದ್ಯೋಗದ ಹೆಸರಿನಲ್ಲಿ ಬೇರೆಯವರ ಜೀವನದ ಹಕ್ಕು ಉಲ್ಲಂಘನೆಗೆ ಅವಕಾಶ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠವು, ‘ಅಮಾಯಕ ಜನರ ಜೀವನದ ಹಕ್ಕು ರಕ್ಷಿಸುವುದೇ ನಮ್ಮ ಆದ್ಯತೆ’ ಎಂದು ಸ್ಪಷ್ಟಪಡಿಸಿತು.

ಉದ್ಯೋಗ, ನಿರುದ್ಯೋಗ ಹಾಗೂ ಜನರ ಜೀವನದ ಹಕ್ಕು ನಡುವೆ ನಾವು ನಿರ್ಧರಿಸಬೇಕಾಗಿದೆ. ಉದ್ಯೋಗದ ಹೆಸರಿನಲ್ಲಿ ಇತರೆ ನಾಗರಿಕರ ಹಕ್ಕಿನ ಉಲ್ಲಂಘನೆಯಾಗಬಾರದು ಎಂದು ಪೀಠ ಹೇಳಿತು.

‘ಸಂಬಂಧಿತ ಕಾನೂನುಗಳಿವೆ. ಆದರೆ, ಅದನ್ನು ಸಕಾಲದಲ್ಲಿ ಅನುಷ್ಠಾನಗೊಳಿಸದಿರುವುದೂ ಇದೆ. ನಮ್ಮ ಆದೇಶವನ್ನು ಅದರ ಪೂರ್ಣ ಸಾರದೊಂದಿಗೆ ಜಾರಿಗೊಳಿಸಬೇಕು’ ಎಂದು ಪೀಠವು ಸ್ಪಷ್ಟಪಡಿಸಿತು.

ಪಟಾಕಿ ತಯಾರಕರ ಸಂಘವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆತ್ಮಾರಾಂ ನಾಡಕರ್ಣಿ, ದೀಪಾವಳಿ ಹಬ್ಬ ಹತ್ತಿರವಾಗುತ್ತಿದ್ದು, ಪೆಟ್ರೋಲಿಯಂ ಮತ್ತು ಎಕ್ಸ್‌ಪ್ಲೋಸಿವ್ ಸುರಕ್ಷತಾ ಸಂಸ್ಥೆ (ಪಿಇಎಸ್‌ಒ) ತೀರ್ಮಾನಿಸಬೇಕು ಎಂದರು. ಸಾವಿರಾರು ಜನರು ನಿರುದ್ಯೋಗಿಗಳಾಗಲಿದ್ದು, ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣನ್‌ ಅವರು, ಸುಪ್ರೀಂ ಕೋರ್ಟ್‌ ಈ ಕುರಿತು ವಿವಿಧ ಆದೇಶ ನೀಡಿದೆ. ಸುರಕ್ಷಿತ ಎನ್ನುವಂತಹ ತೀರ್ಮಾನವನ್ನು ಪಿಇಎಸ್‌ಒ ಕೈಗೊಳ್ಳಬೇಕು ಎಂದರು.

Related Articles

Leave a Reply

Your email address will not be published. Required fields are marked *

Back to top button