ಉತ್ತರ ಪ್ರದೇಶ ಚುನಾವಣೆ; ಕಾರ್ಯತಂತ್ರ ಸಭೆ ಆರಂಭಿಸಿದ ಬಿಜೆಪಿ
ಲಖ್ನೋ, ಸೆಪ್ಟೆಂಬರ್ 23: ತೀವ್ರ ಕುತೂಹಲ ಕೆರಳಿಸಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಬಿಜೆಪಿ ಸನ್ನದ್ಧವಾಗುತ್ತಿದೆ. ಮುಂದಿನ ವರ್ಷಾರಂಭದಲ್ಲಿಯೇ ವಿಧಾನಸಭೆ ಚುನಾವಣೆ ಎದುರಾಗುವುದಾಗಿ ತಿಳಿದುಬಂದಿದ್ದು, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಚುನಾವಣಾ ತಂಡ ಬುಧವಾರ ಲಖ್ನೋಗೆ ಭೇಟಿ ನೀಡಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಹಾಗೂ ಕಾರ್ಯತಂತ್ರದ ಪ್ರಕ್ರಿಯೆಯನ್ನು ಆರಂಭಿಸಲು ಸಭೆ ನಡೆಸಲಾಗಿದೆ. ಕೇಂದ್ರ ನಾಯಕರು ಎರಡು ದಿನಗಳ ಕಾಲ ರಾಜ್ಯ ರಾಜಧಾನಿಯಲ್ಲಿ ಉಳಿಯಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅನುರಾಗ್ ಠಾಕೂರ್ ಸೇರಿದಂತೆ ಚುನಾವಣಾ ಸಮಿತಿ ಸದಸ್ಯರು ಬುಧವಾರ ಮಧ್ಯಾಹ್ನ ನಗರಕ್ಕೆ ಆಗಮಿಸುತ್ತಿದ್ದಂತೆಯೇ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಪಕ್ಷದ ಕಚೇರಿಯಲ್ಲಿ ಸೇರಿದ್ದಾರೆ. ಅವರೊಂದಿಗೆ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ, ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿನೇಶ್ ಶರ್ಮಾ, ಉತ್ತರ ಪ್ರದೇಶ ಉಸ್ತುವಾರಿ ರಾಧಾ ಮೋಹನ್ ಸಿಂಗ್ ಹಾಗೂ ಉತ್ತರಾಖಂಡದ ಮಾಜಿ ರಾಜ್ಯಪಾಲರು ಹಾಗೂ ಹೊಸದಾಗಿ ನೇಮಕವಾದ ರಾಷ್ಟ್ರೀಯ ಉಪಾಧ್ಯಕ್ಷರಾದ ಬೇಬಿ ರಾಣಿ ಮೌರ್ಯ ಸಭೆಯಲ್ಲಿ ಸೇರಿದ್ದರು.
ಸಂಜೆವರೆಗೂ ಸಭೆ ನಡೆದಿದ್ದು, ರಾಜ್ಯ ಕ್ಯಾಬಿನೆಟ್ ಮಂತ್ರಿಗಳು ಚರ್ಚೆಯ ಭಾಗವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಪಕ್ಷದ ಕಾರ್ಯಕ್ರಮಗಳು, ಚುನಾವಣಾ ಪ್ರಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದು, ಇದು ಚುನಾವಣಾ ಪೂರ್ವಭಾವಿ ಸಭೆಯಾಗಿದೆ. ಗುರುವಾರ ಚುನಾವಣೆ ಕಾರ್ಯತಂತ್ರಗಳ ಕುರಿತು ಸಭೆ ನಡೆಯಲಿದೆ. ಇತ್ತೀಚೆಗೆ ನೇಮಿಸಲಾಗಿರುವ ವಲಯಗಳ ಉಸ್ತುವಾರಿ ನಾಯಕರು ಹಾಗೂ ರಾಜ್ಯದ ಪ್ರಮುಖ ನಾಯಕರು ಈ ಸಭೆಯ ಭಾಗವಾಗಿರಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕರು ಮಾಹಿತಿ ನೀಡಿದ್ದಾರೆ.
ಬುಧವಾರ ಉತ್ತರ ಪ್ರದೇಶಕ್ಕೆ ಆಗಮಿಸುತ್ತಿದ್ದಂತೆಯೇ ಅನುರಾಗ್ ಠಾಕೂರ್ ಆಶಾವಾದ ವ್ಯಕ್ತಪಡಿಸಿದ್ದಾರೆ. ‘ಈ ಬಾರಿ ಉತ್ತರ ಪ್ರದೇಶ ಜನರು ಬಿಜೆಪಿಯನ್ನು ಆಶೀರ್ವದಿಸುತ್ತಾರೆ ಹಾಗೂ ಹೆಚ್ಚಿನ ಮತಗಳು, ಸ್ಥಾನಗಳನ್ನು ಬಿಜೆಪಿಗೆ ನೀಡುತ್ತಾರೆಂಬ ಭರವಸೆಯಿದೆ’ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದೊಂದಿಗೆ, ಗೋವಾ, ಪಂಜಾಬ್, ಉತ್ತರಾಖಂಡ್ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಕೂಡ ನಡೆಯಲಿದ್ದು, 2022ರ ಆರಂಭದಲ್ಲಿಯೇ ವಿಧಾನಸಭೆ ಚುನಾವಣೆಗಳು ಎದುರಾಗಲಿವೆ ಎಂಬ ಮಾಹಿತಿ ಇದೆ. ಹೀಗಾಗಿ ಬಿಜೆಪಿ ಈಗಾಗಲೇ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ.