ಕಾರವಾರ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಶುಕ್ರವಾರ ನಿಧನರಾಗಿದ್ದಾರೆ. ಅವರ ಸಾವನ್ನು ಯಾರೂ ಊಹೆ ಕೂಡ ಮಾಡಿರಲಿಲ್ಲ. ಲಕ್ಷಾಂತರ ಅಭಿಮಾನಿಗಳನ್ನು ಪುನೀತ್ ಅಗಲಿದ್ದಾರೆ. ಈ ನಡುವೆ ಪುನೀತ್ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಚಿತ್ರೀಕರಿಸಿದ್ದ ಡಾಕ್ಯುಮೆಂಟರಿಯೊಂದು ಬಿಡುಗಡೆಗೂ ಎರಡೇ ದಿನ ಇರುವಾಗ ಅವರ ಅಗಲಿಕೆಯು ಜಿಲ್ಲೆಯ ಜನತೆಗೂ ಬರ ಸಿಡಿಲು ಬಡಿತಂದಾಗಿದೆ. ಪುನೀತ್ ಜಿಲ್ಲೆಯಲ್ಲಿ ಕಳೆದ ಆ ಅದ್ಭುತ ಕ್ಷಣ ಈಗ ನೆನಪು ಮಾತ್ರ. ಪುನೀತ್ ಗೆ ಉತ್ತರ ಕನ್ನಡವೆಂದರೆ ಬಹಳ ಪ್ರೀತಿ. ಇಲ್ಲಿನ ನಿಸರ್ಗ ಸೌಂದರ್ಯ, ಕಡಲತೀರ- ಜಲಪಾತಗಳ ಸೊಬಗನ್ನು ಪುನೀತ್ ನೆಚ್ಚಿಕೊಂಡಿದ್ದರು. ಈ ಬಗ್ಗೆ ಜಿಲ್ಲೆಗೆ ಭೇಟಿ ನೀಡಿದ್ದ ವೇಳೆ ಪುನೀತ್ ಹೇಳಿಕೊಂಡಿದ್ದರು. ಹೀಗಾಗಿ ಈ ವರ್ಷದ ಜನವರಿ- ಫೆಬ್ರುವರಿಯಲ್ಲಿ ಪುನೀತ್ ಹೆಚ್ಚಿನ ಸಮಯ ಉತ್ತರ ಕನ್ನಡದಲ್ಲೇ ಕಳೆದಿದ್ದರು.
ಡ್ಯಾಕುಮೆಂಟರಿ ಚಿತ್ರೀಕರಣಕ್ಕೆ ಬಂದಿದ್ರು
ಜಿಲ್ಲೆಗೆ ಭೇಟಿ ನೀಡಿದ್ದ ಅವರು, ಕುಮಟಾ, ಗೋಕರ್ಣ, ಮುರುಡೇಶ್ವರ, ಜೊಯಿಡಾ ತಾಲೂಕಿನಲ್ಲಿ ಪುನೀತ್ ತಮ್ಮ ತಂಡದೊಂದಿಗೆ ತಿರುಗಾಡಿ ಡಾಕ್ಯುಮೆಂಟರಿಗಾಗಿ ಚಿತ್ರೀಕರಣ ನಡೆಸಿದ್ದರು. ಕಡಲತೀರಗಳಲ್ಲಿ ಓಡಾಡಿ, ಸ್ಟಂಟ್ ಗಳನ್ನೂ ಮಾಡಿದ್ದರು. ಗೋಕರ್ಣಕ್ಕೆ ಡಾಕ್ಯುಮೆಂಟರಿ ಚಿತ್ರೀಕರಣಕ್ಕಾಗಿ ಭೇಟಿ ನೀಡಿದ್ದ ಪುನೀತ್, ಸಾಮಾನ್ಯರಂತೆ ಕಡಲತೀರದಲ್ಲಿ ಅಡ್ಡಾಡಿದ್ದರು. ತೀರದ ಹೋಟೆಲ್ಗಳಲ್ಲಿ ಖಾದ್ಯಗಳನ್ನು ಸವಿಯುತ್ತಾ ಕಾಲ ಕಳೆದಿದ್ದರು.
ಗೋಕರ್ಣದ ಪುರಾಣ ಪ್ರಸಿದ್ಧ ಶ್ರೀಮಹಾಬಲೇಶ್ವರ ದೇವಾಲಯಕ್ಕೂ ಭೇಟಿ ನೀಡಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಿದ್ದರು. ತದನಂತರ ಮುರುಡೇಶ್ವರಕ್ಕೆ ಭೇಟಿ ನೀಡಿದ್ದ ಅವರು, ಇಲ್ಲಿಗೆ ಸಮೀಪದ ನೇತ್ರಾಣಿ ದ್ವೀಪ ಪ್ರದೇಶದಲ್ಲಿ ಹೆಚ್ಚಿನ ಭಾಗ ಚಿತ್ರೀಕರಣ ನಡೆಸಿ, ಮುರುಡೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿ ತೆರಳಿದ್ದರು.