ರಾಜ್ಯ

ಉಡುಪಿ: ಸಂಸದರ ಆದರ್ಶ ಗ್ರಾಮ ಕೆರಾಡಿಯಲ್ಲಿ ಸ್ಮಶಾನ ಮೌನ; ಅಭಿವೃದ್ಧಿ ಕಾಣದೇ ಊರು ಬಿಟ್ಟ ಜನರು

ಉಡುಪಿ, ಸೆಪ್ಟೆಂಬರ್ 30: ಅದ್ಭುತ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಈ ಊರಿನ ಹೆಸರು ಕೆರಾಡಿ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಕೇಂದ್ರದಿಂದ ಬಹುದೂರವಿರುವ ಊರು. 2014ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶಿವಮೊಗ್ಗ (ಉಡುಪಿ ಜಿಲ್ಲೆಯ ಕೆಲ ಗ್ರಾಮಗಳು ಕ್ಷೇತ್ರಕ್ಕೆ ಸೇರಿವೆ) ಸಂಸದರಾಗಿದ್ದಾಗ ಆದರ್ಶ ಗ್ರಾಮವಾಗಿ ಕೆರಾಡಿ ಆಯ್ಕೆಯಾಗಿತ್ತು.

ಸಂಸದರ ಆದರ್ಶ ಗ್ರಾಮವಾಗಿ ಆಯ್ಕೆಯಾದಾಗ ಊರಿವರು ಇನ್ನಾದರೂ ಸಮಸ್ಯೆಗೆ ಮುಕ್ತಿ ಸಿಗುತ್ತದೆ ಅಂತ ಕನಸು ಕಂಡಿದ್ದರು. ಆದರೆ ಕಂಡ ಕನಸು ನನಸಾಗಲೇ ಇಲ್ಲ. ಕೆರಾಡಿ ಗ್ರಾಮದ ಈ ಪ್ರದೇಶದಲ್ಲಿ ಕೆಲ ವರ್ಷಗಳ ಹಿಂದೆ ಹಲವಾರು ಮನೆಗಳಿದ್ದವು. ಆದರೆ‌ ಈಗ ವಾಸ ಅಂತ ಇರುವುದು ಕೇವಲ ಮೂರೇ ಮೂರು ಮನೆಗಳು. ಉಳಿದ ಮನೆಗಳಿಗೆಲ್ಲಾ ಬಾಗಿಲು ಹಾಕಲಾಗಿದ್ದು, ಜನ ದೂರದ ಪಟ್ಟಣ ಸೇರಿದ್ದಾರೆ.
ವಿದ್ಯುತ್ ಸಂಪರ್ಕ ಭರವಸೆಯಾಗಿಯೇ ಉಳಿದಿದೆ

ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಈ ಊರಿಗೆ ಬರಬೇಕಾದರೆ ಹೊಂಡ- ಗುಂಡಿಯ ರಸ್ತೆ ಮೂಲಕವೇ ಬರಬೇಕು. ಊರಿಗೆ ವಿದ್ಯುತ್ ಸಂಪರ್ಕ ಭರವಸೆಯಾಗಿಯೇ ಉಳಿದಿದ್ದು, ಹೀಗಾಗಿ ಇವರು ಮನೆಗಳಿಗೆ ರಾತ್ರಿ ಬೆಳಕಿಗಾಗಿ ಸೋಲಾರ್ ಅಳವಡಿಕೆ ಮಾಡಿದ್ದಾರೆ. ಇನ್ನೂ ನೆಟ್‌ವರ್ಕ್ ಸಂಪರ್ಕ ಈ ಊರಲ್ಲಿ ಇಲ್ಲವೇ ಇಲ್ಲ. ಈ ಎಲ್ಲ ಸಮಸ್ಯೆ ಸಾಕಪ್ಪ ಸಾಕು ಅಂತ ಇದ್ದ ಜನರು, ದೂರದ ಪಟ್ಟಣದಲ್ಲಿ ಮನೆ ಮಾಡಿಕೊಂಡಿದ್ದಾರೆ. ಹಲವು ಮನೆಗಳಿದ್ದ ಈ ಪ್ರದೇಶದಲ್ಲಿ ಉಳಿದಿರುವುದು ಮೂರು ಮನೆಗಳು ಮಾತ್ರ.

ಇನ್ನೂ ಕೆರಾಡಿಯ ಈ ಪ್ರದೇಶದಲ್ಲಿ ಉತ್ತಮ ಕೃಷಿ ಭೂಮಿ ಇದ್ದು, ಬೇಸಿಗೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದೇ ನೀರು ಹಾಯಿಸುದಕ್ಕೆ ಸಮಸ್ಯೆ ಆಗುತ್ತಿದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ಕೊಂಡೊಯ್ಯುವುದು ಕಷ್ಟವೇ. ಇಷ್ಟೇ ಅಲ್ಲದೇ ಇದೇ ಪ್ರದೇಶದಲ್ಲಿ ಪ್ರಸಿದ್ಧ ಶ್ರೀ ಕೇಶವನಾಥೇಶ್ವರ ಉದ್ಭವ ಲಿಂಗ ದೇವಾಲಯ ಇದೆ.

Related Articles

Leave a Reply

Your email address will not be published. Required fields are marked *

Back to top button