ಇತ್ತೀಚಿನ ಸುದ್ದಿಕ್ರೈಂವಿದೇಶಸುದ್ದಿ

ಉಕ್ರೇನ್ ಮೇಲೆ ರಷ್ಯಾ ದಾಳಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನ!ಈ ಬಿಕ್ಕಟ್ಟಿಗೆ ವಿಶ್ವದ ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಮೊದಲ ದಿನದಲ್ಲಿ 137 ಜನರು ಮರಣವನ್ನಪ್ಪಿದ್ದಾರೆ. ಇದು ಯುರೋಪ್​ನಲ್ಲಿ ಎರಡನೇ ಮಹಾಯುದ್ಧದ ನಂತರ ನಡೆಯುತ್ತಿರುವ ಮೊದಲ ಭೀಕರ ಕದನವಾಗಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರದಂದು ಉಕ್ರೇನ್‌ ಮೇಲೆ ಆಕ್ರಮಣವನ್ನು ಘೋಷಿಸಿದ್ದರು. ಉಕ್ರೇನ್ ರಾಜಧಾನಿ ಕೈವ್ ಸೇರಿದಂತೆ ಅಲ್ಲಿನ ಪ್ರಮುಖ ನಗರಗಳ ಮೇಲೆ ರಷ್ಯಾದ ಮಿಲಿಟರಿ ಪಡೆಗಳು ದಾಳಿ ನಡೆಸಲಾಗಿದೆ. ಈ ಬಿಕ್ಕಟ್ಟಿಗೆ ವಿಶ್ವದ ನಾಯಕರು ಆತಂಕ ವ್ಯಕ್ತಪಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಈ ಯುದ್ಧದಲ್ಲಿ ರಷ್ಯಾ ವಿರುದ್ಧ ಹೋರಾಡಲು ಉಕ್ರೇನ್ ಏಕಾಂಗಿಯಾಗಿ ಉಳಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಬೇಸರ ಹೊರಹಾಕಿದ್ದಾರೆ.

ಎರಡನೇ ಮಹಾಯುದ್ಧದ ನಂತರ ಯುರೋಪ್ ಮೊದಲ ಅತಿದೊಡ್ಡ ಯುದ್ಧ ನೋಡುತ್ತಿದೆ ಎಂದಿರುವ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರದಂದು ಉಕ್ರೇನ್ ರಾಜಧಾನಿ ಕೈವ್ನಲ್ಲಿ ಉಳಿಯುವುದಾಗಿ ವಾಗ್ದಾನ ಮಾಡಿದ್ದಾರೆ. ಶತ್ರು ತಮ್ಮನ್ನು ನಂಬರ್ ಒನ್ ಗುರಿ ಎಂದು ಗುರುತಿಸಿದ್ದಾರೆ ಎಂದಿರುವ ಝೆಲೆನ್ಸ್ಕಿ, ತಮ್ಮ ಕುಟುಂಬವು ಎರಡನೇ ಗುರಿಯಾಗಿದೆ ಎಂದಿದ್ದಾರೆ. ‘‘ರಾಷ್ಟ್ರದ ಮುಖ್ಯಸ್ಥರನ್ನು ನಾಶಪಡಿಸುವ ಮೂಲಕ ಉಕ್ರೇನ್ ಅನ್ನು ರಾಜಕೀಯವಾಗಿ ನಾಶಮಾಡಲು ವಿರೋಧಿಗಳು ಬಯಸುತ್ತಿದ್ದಾರೆ. ನಾನು ರಾಜಧಾನಿಯಲ್ಲಿಯೇ ಇರುತ್ತೇನೆ. ನನ್ನ ಕುಟುಂಬವೂ ಉಕ್ರೇನ್‌ನಲ್ಲಿದೆ’’ ಎಂದು ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆಂದು ರಾಯಿಟರ್ಸ್ ವರದಿ ಮಾಡಿದೆ.

ರಷ್ಯಾ ಆಕ್ರಮಣ ಆರಂಭಿಸಿ ಸೈರನ್ ಮೊಳಗಿಸಿದಾಗ ಜನರಿಗೆ ಶಾಂತವಾಗಿರುವಂತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಕರೆಕೊಟ್ಟಿದ್ದರು. ‘‘ರಷ್ಯಾ ದುಷ್ಟ ಮಾರ್ಗವನ್ನು ಪ್ರಾರಂಭಿಸಿದೆ. ಆದರೆ ಉಕ್ರೇನ್ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತಿದೆ ಮತ್ತು ತನ್ನ ಸ್ವಾತಂತ್ರ್ಯವನ್ನು ಬಿಟ್ಟುಕೊಡುವುದಿಲ್ಲ’’ ಎಂದು ಝೆಲೆನ್ಸ್ಕಿ ತಮ್ಮ ಟ್ವೀಟ್​ನಲ್ಲಿ ಪ್ರತಿಪಾದಿಸಿದ್ದಾರೆ. 10 ಮಿಲಿಟರಿ ಅಧಿಕಾರಿಗಳು ಸೇರಿದಂತೆ 137 ‘ವೀರರು’ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ ಮತ್ತು 316 ಜನರು ಗಾಯಗೊಂಡಿದ್ದಾರೆ ಎಂದು ಅವರು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಉಕ್ರೇನ್​ನಲ್ಲಿ ವಾಸವಿರುವ ದೇಶದ 16,000 ಜನರನ್ನು ಭಾರತಕ್ಕೆ ಮರಳಿ ಕರೆತರಲು ಪ್ರಯತ್ನಿಸಲಾಗುತ್ತಿದೆ. ಗುರುವಾರ ರಾತ್ರಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಫೋನ್ ಕರೆಯಲ್ಲಿ ಪ್ರಧಾನಿ ಮೋದಿ ಮಾತನಾಡಿ, ಕದನ ವಿರಾಮ ಘೋಷಿಸುವಂತೆ ಆಗ್ರಹಿಸಿದ್ದಾರೆ. ಪ್ರಸ್ತುತ ವಿದೇಶಾಂಗ ಸಚಿವಾಲಯವು ಜನರನ್ನು ಕರೆತರಲು ವಿವಿಧ ಮಾರ್ಗಗಳ ಅನ್ವೇಷಣೆಯಲ್ಲಿ ನಿರತವಾಗಿದೆ.

ಅಮೇರಿಕಾವು ರಷ್ಯಾದ ಮೇಲೆ ಹೊಸ ನಿರ್ಬಂಧಗಳನ್ನು ಹೇರಿದೆ. ರಷ್ಯಾ ಅಧ್ಯಕ್ಷ ಪುಟಿನ್​ರನ್ನು ತಡೆಯಲು ಇದು ಸಾಕಾಗುವುದಿಲ್ಲ ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಒಪ್ಪಿಕೊಂಡಿದ್ದಾರೆ. ಅದಾಗ್ಯೂ ಅವರು, ‘‘ಪುಟಿನ್ ಆಕ್ರಮಣಕಾರಿ. ಅವರೇ ಯುದ್ಧ ಆರಂಭಿಸಿದವರು. ಇದೀಗ ಅವರ ದೇಶವೇ ಪರಿಣಾಮಗಳನ್ನು ಎದುರಿಸಲಿದೆ. ಸೋವಿಯತ್ ಒಕ್ಕೂಟವನ್ನು ಮರುಸ್ಥಾಪಿಸುವ ದಾರಿತಪ್ಪಿದ ಕನಸನ್ನು ಹೊಂದಿದ್ದಾರೆ ಎಂದು ಬಿಡೆನ್ ಹೇಳಿದ್ದಾರೆ.

ಅಮೇರಿಕಾ ಹೇರಿರುವ ಹೊಸ ನಿರ್ಬಂಧಗಳಲ್ಲಿ ರಷ್ಯಾ ಉದ್ದಿಮೆ ನಡೆಸುವ ಡಾಲರ್, ಯೂರೋ, ಪೌಂಡ್ ಹಾಗೂ ಯೆನ್​ಗಳನ್ನು ಕೇಂದ್ರೀಕರಿಸಲಾಗಿದೆ. ಅಲ್ಲದೇ ರಷ್ಯಾದ ದೊಡ್ಡ ಸಾಲದಾತ ಬ್ಯಾಂಕ್ ಆಗಿರುವ ಸ್ಬೆರ್​​​ಬ್ಯಾಂಕ್ ಸೇರಿದಂತೆ ಐದು ಪ್ರಮುಖ ಬ್ಯಾಂಕ್​ಗಳಿಗೆ ನಿರ್ಬಂಧ ಹೇರಲಾಗಿದೆ.

ರಷ್ಯಾ- ಉಕ್ರೇನ್ ಯುದ್ಧದ ಮೊದಲ ದಿನ ರಷ್ಯಾ ಉಕ್ರೇನ್​ನಲ್ಲಿ ಸೇನೆ ನಿಯೋಜಿಸಿತು. ತಕ್ಷಣ ದಾಳಿ ನಡೆಸುವ ಆತಂಕದ ಕಾರಣ, ಉಕ್ರೇನ್ ರಾಜಧಾನಿ ಕೈವ್​ನ ವಾಯುನೆಲೆಯನ್ನು ಮುಚ್ಚಲಾಯಿತು. ಯುರೋಪ್​ನ ಸ್ಯಾಟಲೈಟ್​ ಚಿತ್ರಗಳು ಉಕ್ರೇನ್ ಮೇಲೆ ಕಪ್ಪು ಚುಕ್ಕೆಯಂತೆ ತೋರುತ್ತಿರುವುದನ್ನು ಸೆರೆ ಹಿಡಿದಿವೆ.

1986ರ ದುರಂತದ ಚೆರ್ನೋಬಿಲ್ ಪರಮಾಣು ಸ್ಥಾವರದ ಮೇಲೆ ಉಕ್ರೇನ್ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದ್ದು, ವೈಟ್​ ಹೌಸ್​ನ ಕೆಲವು ಮೂಲಗಳ ಪ್ರಕಾರ ಅಲ್ಲಿ ಒತ್ತೆಯಳುಗಳನ್ನು ಇರಿಸಿಕೊಳ್ಳಲಾಗಿದೆ.​

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ರಾತ್ರಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿ ಗುರುವಾರ ಬೆಳಗ್ಗೆಯಿಂದ ಉಕ್ರೇನ್ ನಲ್ಲಿ ಆರಂಭಗೊಂಡಿರುವ ಯುದ್ಧ ಮತ್ತು ಹಿಂಸಾಚಾರವನ್ನು ಕೂಡಲೇ ನಿಲ್ಲಿಸುವಂತೆ ಆಗ್ರಹಿಸಿದ್ದರು. ಮುಕ್ತ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕೆಂದು ಪ್ರಧಾನಿ ಹೇಳಿದ್ದರೆಂದು ತಿಳಿದುಬಂದಿದೆ.

ರಷ್ಯಾ ದಾಳಿಯ ಕಾರಣ ಜಾಗತಿಕ ಮಾರುಕಟ್ಟೆ ನಡುಗಿದ್ದು, ಗೋಧಿ ಸೇರಿದಂತೆ ಎಲ್ಲದರ ಬೆಲೆಗಳು ಏರಿಕೆಯಾಗಿವೆ. ಅಮೇರಿಕಾದಂತೆ ಬ್ರಿಟನ್ ಕೂಡ ರಷ್ಯಾ ಮೇಲೆ ನಿರ್ಬಂಧ ಹೇರುವದರ ಬಗ್ಗೆ ಚಿಂತಿಸಿದೆ.

ವಿಶ್ವವು ರಷ್ಯಾದ ದಾಳಿಯನ್ನು ವಿರೋಧಿಸಿದೆ. ನ್ಯಾಟೊ ರಷ್ಯಾದ ದಾಳಿಯು ಒಂದು ಕ್ರೂರವಾದ ನಡೆ ಎಂದು ಟೀಕಿಸಿದೆ. ಯುರೋಪ್​ನಲ್ಲಿದ್ದ ಶಾಂತಿಯನ್ನು ರಷ್ಯಾ ಛಿದ್ರಗೊಳಿಸಿದೆ ಎಂದು ಆರೋಪಿಸಲಾಗಿದೆ. ಆದರೆ ಪುಟಿನ್ ಗುರುವಾರ ಹೇಳಿಕೆ ನೀಡಿ, ಈ ಪ್ರಕರಣದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮಧ್ಯಪ್ರವೇಶಿಸಿದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button