ಈ ವೈಭೋಗವೇ ಜಮೀರ್‌ಗೆ ಕಂಟಕ: ಎಸಿಬಿ ದಾಳಿಗೂ ಕಾರಣ!
ತುಂಬಾ ಪ್ರೀತಿಯಿಂದ ಕಟ್ಟಿಸಿದ 80 ಕೋಟಿ ರೂ.ಗಳಿಗೂ ಅಧಿಕ ವೆಚ್ಚದ ವೈಭವೋಪೇತ ಬಂಗಲೆಯೇ ಶಾಸಕ ಜಮೀರ್ ಅಹಮ್ಮದ್ ಖಾನ್ ಪಾಲಿಗೆ ಕಂಟಕವಾಗಿ ಪರಿಣಮಿಸಿದ್ದು, ಇ.ಡಿ. ಬಳಿಕ ಈಗ ಎಸಿಬಿ ತನಿಖೆಗೂ ಶಾಸಕರ ಅದ್ಧೂರಿ ಮನೆಯೇ ಕಾರಣವಾಗಿದೆ ಎಂದು ತಿಳಿದು ಬಂದಿದೆ.ಎರಡು ವರ್ಷಗಳ ಹಿಂದೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸಮೀಪ ಬಂಬೂ ಬಜಾರಿನಲ್ಲಿ ವೈಭವದ ಮನೆಯನ್ನು ಶಾಸಕ ಜಮೀರ್ ಅಹಮ್ಮದ್ ಕಟ್ಟಿಸಿದ್ದಾರೆ. ಈ ಮನೆಗೆ ವಿದೇಶದ ಮಾರ್ಬಲ್ಸ್ ಹಾಗೂ ಪೀಠೋಪಕರಣ ಸೇರಿದಂತೆ ಅದ್ದೂರಿ ವೆಚ್ಚದಲ್ಲಿ ಮನೆ ನಿರ್ಮಾಣವಾಗಿದೆ.
ಈ ಮನೆ ನಿರ್ಮಾಣದ ವೆಚ್ಚವನ್ನು ಜಮೀರ್ ತಪ್ಪಾಗಿ ನಮೂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಐಎಎಂ ಹಗರಣದ ತನಿಖೆ ಜಮೀರ್ ಮನೆ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು, ಆ ಮನೆ ಕಂಡು ಬೆರಗಾಗಿದ್ದರು. ಈ ಮನೆಯ ನಿವೇಶನ, ಕಟ್ಟಡದ ವೆಚ್ಚ, ಒಳಾಂಗಣ ವಿನ್ಯಾಸ ಸೇರಿದಂತೆ ಪ್ರತಿಯೊಂದರ ಬಗ್ಗೆ ಇ.ಡಿ. ಮೌಲ್ಯವರ್ಧನೆ ಮಾಡಿತು. ಆಗ ಜಮೀರ್ ಮನೆಗೆ ಸುಮಾರು 80 ಕೋಟಿ ರು. ವೆಚ್ಚ ಮಾಡಲಾಗಿದೆ ಎಂಬ ಮಾಹಿತಿ ಇ.ಡಿ.ಗೆ ಸಿಕ್ಕಿತು. ಅದರನ್ವಯ ಜಮೀರ್ ಅಕ್ರಮ ಸಂಪಾದನೆ ಮಾಡಿರುವ ಬಗ್ಗೆ ತನಿಖೆ ನಡೆಸುವಂತೆ ಎಸಿಬಿಗೆ ಇಡಿ ವರದಿ ಸಲ್ಲಿಸಿತು ಎಂದು ತಿಳಿದು ಬಂದಿದೆ.
ಜೀವಂತ ಗುಂಡುಗಳು ಪತ್ತೆ: ಆಸ್ತಿಗಳಿಕೆ ಆರೋಪದಡಿ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮೇಲೆ ಎಸಿಬಿ ರೇಡ್ ಮಾಡಿದೆ. ಇಂದು(ಜುಲೈ.05) ಬೆಳಗ್ಗೆ ಮನೆ, ಕಚೇರಿ ಸೇರಿ 5 ಕಡೆ, 40 ಜನರ ತಂಡದಿಂದ ನಡೆದ ರೇಡ್ ಮಾಡಿದ್ದು, ಇದೀಗ ಪರಿಶೀಲನೆ ಅಂತ್ಯವಾಗಿದೆ. 8 ಗಂಟೆ ಕಾಲ ಸುದೀರ್ಘ ಶೋಧಕಾರ್ಯ ನಡೆಸಿದ ಅಧಿಕಾರಿಗಳು ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಪ್ರಿಂಟರ್ ತಂದು ಕೆಲವು ದಾಖಲೆಗಳನ್ನ ಜೆರಾಕ್ಸ್ ಮಾಡಿಕೊಂಡು ವಶಕ್ಕೆ ಪಡೆದಿದ್ದಾರೆ. ಇನ್ನೂ ಸಿಲ್ವರ್ ಓಕ್ ಅಪಾರ್ಟ್ಮೆಂಟ್‌ನಲ್ಲಿ 25 ಜೀವಂತ ಗುಂಡುಗಳು ಪತ್ತೆಯಾಗಿವೆ.
ಎಸಿಬಿಯ 14 ಅಧಿಕಾರಿಗಳ ತಂಡ ಜಮೀರ್‌ರ ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್ ಬಳಿಯ ನಿವಾಸ, ಸಿಲ್ವರ್ ಓಕ್ ಅಪಾರ್ಟ್‌ಮೆಂಟ್‌ನಲ್ಲಿರುವ 3 ಬಿಎಚ್‌ಕೆ ಫ್ಲ್ಯಾಟ್, ಸದಾಶಿವನಗರದ ಗೆಸ್ಟ್‌ಹೌಸ್, ಬನಶಂಕರಿಯಲ್ಲಿರುವ ಜಿ.ಕೆ.ಅಸೋಸಿಯೇಟ್ಸ್ ಕಚೇರಿ, ಕಲಾಸಿಪಾಳ್ಯದ ಟ್ರಾವೆಲ್ಸ್ ಕಚೇರಿ ಮೇಲೂ ಎಸಿಬಿ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ಕಲೆಹಾಕಿದೆ. ಜಾರಿ ನಿರ್ದೇಶನಾಲಯದ ವರದಿಯ ಆಧಾರದ ಮೇಲೆ ಭ್ರಷ್ಟಾಚಾರ ನಿಗ್ರಹದ ದಳದ ಅಧಿಕಾರಿಗಳು ಶಾಸಕ ಜಮೀರ್ ಅಹ್ಮದ್ ಖಾನ್ ಅವರ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲಿಸಿಕೊಂಡಿದ್ದು, ಜಮೀರ್ ಖಾನ್ ಅವರಿಗೆ ಸೇರಿದ ಐದು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.