ಈ ರಾಜ್ಯಗಳ ವ್ಯವಸ್ಥಾಪನಾ ಹುದ್ದೆಗಳಲ್ಲಿ ಅಧಿಕ ಮಹಿಳೆಯರು!
ಹೊಸದಿಲ್ಲಿ, ಸೆ.29: ಈಶಾನ್ಯ ರಾಜ್ಯಗಳಲ್ಲಿ ವ್ಯವಸ್ಥಾಪನಾ ಹುದ್ದೆಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಇರುವುದು ಅಧ್ಯಯನವೊಂದರಿಂದ ತಿಳಿದುಬಂದಿದೆ. ಮೇಘಾಲಯದಲ್ಲಿ ಇಡೀ ದೇಶದಲ್ಲೇ ಅತ್ಯಧಿಕ ಎಂದರೆ ಶೇಕಡ 34.1ರಷ್ಟು ವ್ಯವಸ್ಥಾಪನಾ ಹುದ್ದೆಗಳು ಮಹಿಳೆಯರ ಕೈಯಲ್ಲಿವೆ. ಸಿಕ್ಕಿಂ ಹಾಗೂ ಮಿಝೋರಾಂ ನಂತರದ ಸ್ಥಾನಗಳಲ್ಲಿವೆ ಎಮದು ವಾರ್ಷಿಕ ಕಾಲಾವಧಿ ಕಾರ್ಮಿಕ ಬಲ ಕುರಿತ ಸಮೀಕ್ಷೆ ಹೇಳಿದೆ.
ಆಂಧ್ರ ಪ್ರದೇಶ (32.3%) ಹಾಗೂ ಪಂಜಾಬ್ (32.1%) ಕೂಡಾ ಅಧಿಕ ಪ್ರಮಾಣದ ಮಹಿಳಾ ವ್ಯವಸ್ಥಾಪಕರನ್ನು ಹೊಂದಿದೆ. ಅಸ್ಸಾಂನಲ್ಲಿ ಅತ್ಯಂತ ಕನಿಷ್ಠ ಅಂದರೆ ಶೇಕಡ 6.9ರಷ್ಟು ವ್ಯವಸ್ಥಾಪನಾ ಹುದ್ದೆಗಳು ಮಾತ್ರ ಮಹಿಳೆಯರ ವಶದಲ್ಲಿವೆ.
ಅಖಿಲ ಭಾರತ ಮಟ್ಟದಲ್ಲಿ ಒಟ್ಟು ವ್ಯವಸ್ಥಾಪನಾ ಹುದ್ದೆಗಳ ಪೈಕಿ ಮಹಿಳೆಯರ ಪಾಲು ಶೇಕಡ 18.7ರಷ್ಟಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಪ್ರಮಾಣ ಶೇಕಡ 21.4 ಆಗಿದ್ದರೆ ನಗರ ಪ್ರದೇಶಗಳಲ್ಲಿ ಶೇಕಡ 16.4ರಷ್ಟಿದೆ.
ಶ್ರಮಶಕ್ತಿಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಪ್ರಮಾಣ ಕುಸಿಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವರದಿಯಲ್ಲಿ ಹೇಳಲಾಗಿದೆ.
ಶಾಸಕಾಂಗ, ಹಿರಿಯ ಅಧಿಕಾರಿಗಳು ಹಾಗೂ ವ್ಯವಸ್ಥಾಪಕ ಹುದ್ದೆಗಳಲ್ಲಿರುವ ಮಹಿಳೆಯರು ಕೂಡಾ ಈಶಾನ್ಯ ರಾಜ್ಯಗಳಲ್ಲಿ ಅಧಿಕ. ಮಣಿಪುರದಲ್ಲಿ ಈ ಪ್ರಮಾಣ ಶೇಕಡ 51.8ರಷ್ಟಿದ್ದು, ಇಡೀ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಮೇಘಾಲಯ (51.7%), ಸಿಕ್ಕಿಂ (50.4%) ಮತ್ತು ಆಂಧ್ರ ಪ್ರದೇಶ (47.9%) ನಂತರದ ಸ್ಥಾನಗಳಲ್ಲಿವೆ. ಅಸ್ಸಾಂ ಈ ಕ್ಷೇತ್ರದಲ್ಲೂ ಕನಿಷ್ಠ ಅಂದರೆ 6.2% ಅನುಪಾತವನ್ನು ಹೊಂದಿದೆ. ಅಖಿಲ ಭಾರತ ಮಟ್ಟದಲ್ಲಿ ಈ ಪ್ರಮಾಣ 23.2% ಆಗಿದ್ದು, ಪುರುಷರು ಹಾಗೂ ಮಹಿಳೆಯರ ನಡುವಿನ ಅಂತರವನ್ನು ಕಿರಿದುಗೊಳಿಸುವ ಅಗತ್ಯವಿದೆ ಎಂದು ವರದಿ ಪ್ರತಿಪಾದಿಸಿದೆ.