ಈ ಕಂಪನಿಗಳಲ್ಲಿ ಇನ್ಮುಂದೆ Work From Home ಪರ್ಮನೆಂಟ್..!
ವಿಶ್ವಾದ್ಯಂತ (Worldwide) ಸಾಂಕ್ರಾಮಿಕವು (Epidemic) ತನ್ನ ಅಧಿಪತ್ಯ ಸ್ಥಾಪಿಸಿದ ನಂತರ ನಮ್ಮೆಲ್ಲರ ಜೀವನ ಬುಡಮೇಲಾಗಿರುವುದಂತೂ ನಿಜ. ಶಾಲಾ(School), ಕಾಲೇಜು, ಕಚೇರಿ ಕೆಲಸಗಳು ಆನ್‌ಲೈನ್‌ನಲ್ಲೇ (online) ಕಾರ್ಯನಿರ್ವಹಿಸುತ್ತಿದ್ದು ಸಾಂಕ್ರಾಮಿಕದ ಆಟಾಟೋಪ ತಗ್ಗಿದ ನಂತರ ಶಾಲಾ ಕಾಲೇಜುಗಳು ಹಿಂದಿನ ಸ್ಥಿತಿಗೆ ಮರಳಿದ್ದರೂ ಕೆಲವೊಂದು ಕಚೇರಿಗಳು (Companies) ಶಾಶ್ವತವಾಗಿ (Permanently) ವರ್ಕ್ ಫ್ರಮ್ ಹೋಮ್ ಘೋಷಿಸಿವೆ. ವರ್ಕ್ ಫ್ರಮ್ ಹೋಮ್ ಪ್ರತಿ ವೃತ್ತಿಗೆ ಚರ್ಚಾಸ್ಪದ ಹಾಗೂ ವ್ಯಕ್ತಿನಿಷ್ಟವಾಗಿದ್ದರೂ ಕಳೆದ 2 ವರ್ಷಗಳಲ್ಲಿ ಬಹಳಷ್ಟು ಕಂಪನಿಗಳು ಅದರ ಪ್ರಯೋಜನ (Benefited) ಪಡೆದುಕೊಂಡಿವೆ.
ಇನ್ನು ಉದ್ಯೋಗಿಗಳು ವರ್ಕ್ ಫ್ರಮ್ ಹೋಮ್‌ನಿಂದ ಬಹಳಷ್ಟು ಲಾಭಗಳನ್ನು ಪಡೆದುಕೊಂಡಿದ್ದು ಹೊಸ ರೀತಿಯ ಉದ್ಯೋಗ ಮೆಚ್ಚಿಕೊಂಡಿದ್ದಾರೆ. ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಘೋಷಿಸಿರುವ ಕಂಪನಿಗಳು ಇಲ್ಲಿವೆ.
ಸ್ಲಾಕ್: (Slack)
ಸ್ಲಾಕ್ ಒಂದು ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಆಗಿದ್ದು ಕಂಪನಿಯಲ್ಲಿ ಕಾರ್ಯನಿರ್ವಹಿಸುವ ವೃತ್ತಿಪರರಿಗೆ ಕಿರಿಕಿರಿ ಇಲ್ಲದೆ ಉದ್ಯೋಗ ಮಾಡುವ ಅನುಕೂಲ ಸೃಷ್ಟಿಸಿದೆ.
ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆಯೇ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಸಂಸ್ಥೆಯು ತ್ವರಿತವಾಗಿ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ವಾತಾವರಣ ಸೃಷ್ಟಿಸಿದೆ. ಹಾಗೂ ಶಾಶ್ವತವಾಗಿ ವರ್ಕ್ ಫ್ರಮ್ ಹೋಮ್ ಘೋಷಿಸಿತು.
ಟ್ವಿಟ್ಟರ್: (Twitter)
ಸ್ಲಾಕ್‌ನಂತೆಯೇ ಟ್ವಿಟ್ಟರ್ ಕೂಡ ವರ್ಕ್ ಫ್ರಮ್ ವ್ಯವಸ್ಥೆಯನ್ನು ಉದ್ಯೋಗಿಗಳಿಗೆ ಘೋಷಿಸಿತು. ಸಾಂಕ್ರಾಮಿಕದ ನಂತರ ಮನೆಯಿಂದಲೂ ಕೆಲಸ ಮಾಡಬಹುದು ಎಂಬುದನ್ನು ಅರಿತುಕೊಂಡ ಕಂಪನಿ ಇದೀಗ ಶಾಶ್ವತವಾಗಿ ಉದ್ಯೋಗ ವ್ಯವಸ್ಥೆಯನ್ನು ಮನೆಯಿಂದಲೇ ಕೆಲಸ ಮಾಡುವುದಕ್ಕೆ ಹೊಂದಿಸಿದೆ.
ಸಂಸ್ಥೆಯ ಮಾಜಿ ಸಿಇಒ ಜ್ಯಾಕ್ ಡೋರ್ಸೆ ಕೋವಿಡ್-19 ಸ್ಫೋಟಗೊಳ್ಳುವ ಮೊದಲೇ ವಿತರಣಾ ಕಾರ್ಯಪಡೆಯ ಯೋಜನೆಗಳಿಗೆ ಒಪ್ಪಿಗೆ ನೀಡಿದರು. ರಿಮೋಟ್ ಉದ್ಯೋಗಗಳನ್ನು ಟ್ವಿಟ್ಟರ್ ಘೋಷಿಸಿದ್ದು ಇದರಲ್ಲಿ ಸೀನಿಯರ್ ಸ್ಟಾಫ್ ರೀಸರ್ಚರ್, ಕ್ರಿಯೇಟರ್ ಎಕ್ಸ್‌ಪೀರಿಯನ್ಸ್ ಹಾಗೂ ಕನ್‌ವರ್ಸೇಶನ್ ಲೀಡ್ ಹುದ್ದೆಗೆ ನೇಮಿಸಿಕೊಳ್ಳುತ್ತಿದೆ.
ಸ್ಪಾಟಿಫೈ: (Spotify)
ಸ್ವೀಡನ್ ಮೂಲದ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಸ್ಪಾಟಿಫೈ ತನ್ನ ಉದ್ಯೋಗಿಗಳಿಗೆ ಎಲ್ಲಿಂದ ಬೇಕಾದರೂ ಕೆಲಸ ಮಾಡಬಹುದು ಎಂಬುದನ್ನು ದೃಢಪಡಿಸಿತು.
ಈ ನೀತಿಯ ಪ್ರಕಾರ, ಸಾಂಕ್ರಾಮಿಕ ರೋಗವು ಕೊನೆಗೊಂಡ ನಂತರವೂ ಸ್ಪಾಟಿಫೈ ಉದ್ಯೋಗಿಗಳು ಮನೆ ಅಥವಾ ಕಚೇರಿಯಿಂದ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ಆದರೆ, ಈ ನಿರ್ಧಾರವು ಸರ್ವಾನುಮತವಾಗಿರಬೇಕು, ಇದನ್ನು ನೌಕರರು ಮತ್ತು ಅವರ ವ್ಯವಸ್ಥಾಪಕರ ನಡುವೆ ನಿರ್ಧರಿಸಲಾಗುತ್ತದೆ. ಉದ್ಯೋಗಿಗಳು ತಮ್ಮ ನಗರ ಅಥವಾ ದೇಶದ ಹೊರಗೆ ಸಹ ಕೆಲಸ ಮಾಡಬಹುದು.
ಟಾಟಾ ಸ್ಟೀಲ್: (Tata Steel)
ಭಾರತದ ಪ್ರೀಮಿಯರ್ ಸ್ಟೀಲ್ ತಯಾರಿಕಾ ಕಂಪನಿ ಟಾಟಾ ಸ್ಟೀಲ್, ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆಯನ್ನು ಉದ್ಯೋಗಿಗಳಿಗೆ ಕಲ್ಪಿಸಿದೆ. ‘ಅಗೈಲ್ ವರ್ಕಿಂಗ್ ಮಾಡೆಲ್’ ಎಂದು ಕರೆಯಲ್ಪಡುವ ಟಾಟಾ ಸ್ಟೀಲ್‌ನ ವರ್ಕ್ ಫ್ರಮ್ ಹೋಮ್ ನೀತಿಯು ಉದ್ಯೋಗಿಗಳಿಗೆ ವರ್ಷದಲ್ಲಿ 365 ದಿನಗಳವರೆಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡಲು ಅನುಮತಿಸುತ್ತದೆ. ಇದಲ್ಲದೆ, ನಿರ್ದಿಷ್ಟ ಸ್ಥಳದಿಂದ ಹೊರಗಿರುವ ಅಧಿಕಾರಿಗಳು ಸಹ ವರ್ಷಕ್ಕೆ ಅನಿಯಮಿತ ಸಂಖ್ಯೆಯ ದಿನಗಳವರೆಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ಮಾಡಬಹುದು.
ಸಂಸ್ಥೆಯು ತನ್ನ ಉದ್ಯೋಗಿಗಳ ಅತ್ಯಗತ್ಯಗಳನ್ನು ಅರಿತುಕೊಂಡಿದ್ದು 2021ರಲ್ಲಿ ಕೋವಿಡ್ ಸಂಕಷ್ಟದ ಸಮಯದಲ್ಲಿ ತನ್ನ ಉದ್ಯೋಗಿಗಳನ್ನು ಬೆಂಬಲಿಸಿತು. ಕೋವಿಡ್-19 ಕಾರಣದಿಂದಾಗಿ ಸಾವನ್ನಪ್ಪಿದ ಎಲ್ಲಾ ಉದ್ಯೋಗಿಗಳ ಕುಟುಂಬಕ್ಕೆ ಮಾಸಿಕ ವೇತನ ಪಾವತಿಸುವುದನ್ನು ಮುಂದುವರಿಸುವುದಾಗಿ ಟಾಟಾ ಸ್ಟೀಲ್ ಘೋಷಿಸಿತು. ಸಂಬಳದ ಜೊತೆಗೆ, ಕಂಪನಿಯು ವೈದ್ಯಕೀಯ ಸೌಲಭ್ಯಗಳು ಮತ್ತು ವಸತಿ ಸೌಲಭ್ಯಗಳನ್ನು ಸಹ ನೀಡಿದೆ.
ಮೆಟಾ: (Meta)
ಫೇಸ್‌ಬುಕ್ ಎಂದು ಈ ಹಿಂದೆ ಕರೆಯಲಾದ ಮೆಟಾ ಸಾಂಕ್ರಾಮಿಕದ ರೋಗದ ಆರಂಭದಲ್ಲಿ ತನ್ನ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ವ್ಯವಸ್ಥೆ ಘೋಷಿಸಿತು. ಇದೀಗ ಕಂಪನಿಯು ಆಫೀಸ್ ಡೆಫರಲ್ ಪ್ರೊಗ್ರಾಮ್ ಪದ್ಧತಿಯನ್ನು ಜಾರಿಗೆ ತಂದಿದ್ದು ಉದ್ಯೋಗಿಗಳು ಕಚೇರಿಗಳಿಗೆ ಹಿಂತಿರುಗಲು ನಮ್ಯತೆ ಹೊಂದಿದೆ ಎಂದು ಖಚಿತಪಡಿಸುತ್ತದೆ.
ಡಿಸೆಂಬರ್‌ನಲ್ಲಿ, ಸೋಶಿಯಲ್ ಮೀಡಿಯಾ ಟೆಕ್ ಕಂಪನಿಯು ತನ್ನ ಯುಎಸ್ ಕಚೇರಿಗಳನ್ನು ಜನವರಿ 31, 2022ರಂದು ಸಂಪೂರ್ಣವಾಗಿ ಪುನಃ ತೆರೆಯುವುದಾಗಿ ಘೋಷಿಸಿದರೂ, ರಿಮೋಟ್ ಮತ್ತು ಮನೆಯಿಂದ ಕೆಲಸ ಮಾಡುವುದನ್ನು ವಿನಂತಿಸಿರುವ ಉದ್ಯೋಗಿಗಳಿಗೆ ಪೂರ್ಣ ಸಮಯದ ರಿಮೋಟ್ ಇಲ್ಲವೇ ವರ್ಕ್ ಫ್ರಮ್ ಹೋಮ್ ಉದ್ಯೋಗ ನೀಡುವ ತನ್ನ ಹಿಂದಿನ ಯೋಜನೆಗಳಿಗೆ ಬದ್ಧವಾಗಿದೆ ಎಂಬುದಾಗಿ ಅದು ಪುನರುಚ್ಚರಿಸಿತು.
ಮೈಕ್ರೋಸಾಫ್ಟ್: (Microsoft)
ಸಾಂಕ್ರಾಮಿಕ ರೋಗದ ಸಮಯದಲ್ಲಿ ಮೈಕ್ರೋಸಾಫ್ಟ್, ಸಂಪೂರ್ಣ ಹೈಬ್ರಿಡ್ ಕೆಲಸದ ಕೈಪಿಡಿಯನ್ನು ತಯಾರಿಸಿತು, ತನ್ನ ಉದ್ಯೋಗಿಗಳಿಗೆ ಕೆಲಸದ ವಾರದ 50 ಪ್ರತಿಶತಕ್ಕಿಂತ ಕಡಿಮೆ ಕಾಲ ಮನೆಯಿಂದ ಮುಕ್ತವಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಮತ್ತು ನಿರ್ವಾಹಕರಿಗೆ ಶಾಶ್ವತ ದೂರಸ್ಥ ಕೆಲಸವನ್ನು ಅನುಮೋದಿಸಲು ಸಾಧ್ಯವಾಗಿಸಿದೆ.
ವೈಯಕ್ತಿಕ ಕೆಲಸದ ರೀತಿಗಳನ್ನು ಬೆಂಬಲಿಸಲು ಸಂಸ್ಥೆಯು ಉದ್ಯೋಗಿಗಳಿಗೆ ನಮ್ಯತೆ ಒದಗಿಸಿದ್ದು ವ್ಯಾಪಾರದ ಅಗತ್ಯಗಳನ್ನು ಸಮತೋಲಗೊಳಿಸಿಕೊಂಡು ಹೋಗುವುದಾಗಿ ಸಂಸ್ಥೆ ತಿಳಿಸಿದೆ. ಈ ಕುರಿತು ಮೈಕ್ರೋಸಾಫ್ಟ್‌ನ ಮುಖ್ಯ ಪೀಪಲ್ ಆಫೀಸರ್ ಕ್ಯಾಥ್ಲೀನ್ ಹೊಗನ್ ಅಧಿಕೃತ ಮೈಕ್ರೋಸಾಫ್ಟ್ ಬ್ಲಾಗ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಶಾಪಿಫೈ: (Shopify)
ಶಾಪಿಫೈ ಎಂಬುದು ಕ್ಲೌಡ್-ಆಧಾರಿತ ಮಲ್ಟಿಚಾನಲ್ ಆಗಿದ್ದು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ತಮ್ಮ ಮಳಿಗೆಗಳನ್ನು ಬಹು ಮಾರಾಟದ ಚಾನಲ್‌ಗಳಲ್ಲಿ ರಚಿಸಲು, ವಿನ್ಯಾಸಗೊಳಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಸಾಂಕ್ರಾಮಿಕ ರೋಗದಿಂದ ಕಂಪನಿಯು ಮನೆಯಿಂದ ಕೆಲಸ ಮಾಡಲು ಉದ್ಯೋಗಿಗಳನ್ನು ಅನುಮತಿಸಿದೆ ಮತ್ತು ಇದೀಗ ಸಂಸ್ಥೆಯ ಉದ್ಯೋಗಿಗಳು ಶಾಶ್ವತವಾಗಿ ಮನೆಯಿಂದಲೇ ಕೆಲಸ ಮಾಡಬಹುದು.