ಇ.ಡಿಯಿಂದ ವಾಧ್ವಾನ್ ಸಹೋದರರಿಗೆ ಸೇರಿದ ₹ 578 ಕೋಟಿ ಮೌಲ್ಯದ ಸ್ವತ್ತು ಜಪ್ತಿ
ನವದೆಹಲಿ: ಉತ್ತರ ಪ್ರದೇಶ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿನ (ಯುಪಿಪಿಸಿಎಲ್) ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ, ಡಿಎಫ್‌ಎಚ್‌ಎಲ್ ಪ್ರವರ್ತಕರಾದ ಕಪಿಲ್ ವಾಧ್ವಾನ್, ಧೀರಜ್ ವಾಧ್ವಾನ್ ಅವರ ಒಡೆತನದ ಬ್ರಿಟನ್ ಮೂಲದ ಕಂಪನಿಗೆ ಸೇರಿದ ₹ 578 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಯ (ಇ.ಡಿ) ಮಂಗಳವಾರ ತಿಳಿಸಿದೆ.
‘ಬ್ರಿಟನ್ ಮೂಲದ ಡಬ್ಲ್ಯುಜಿಸಿ-ಯುಕೆ ಕಂಪನಿ ಮೂಲಕ ವಾಧ್ವಾನ್ ಸಹೋದರರು, ಬ್ರಿಟನ್‌ನ ಹಲವು ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ’ ಎಂದು ಇ.ಡಿ ತಿಳಿಸಿದೆ.
ಯೆಸ್ ಬ್ಯಾಂಕ್ ವಂಚನೆ ಪ್ರಕರಣದ ಸಂಬಂಧ ವಾಧ್ವಾನ್ ಸಹೋದರರು ಈಗ ಜೈಲಿನಲ್ಲಿದ್ದಾರೆ.
‘ಯುಪಿಪಿಸಿಎಲ್‌ನ ನೌಕರರ ಭವಿಷ್ಯ ನಿಧಿ ಹಾಗೂ ಸಿಪಿಎಫ್‌ನ ಹಣವನ್ನು ಕಾನೂನುಬಾಹಿರವಾಗಿ ಡಿಎಚ್‌ಎಫ್‌ಎಲ್‌ನಲ್ಲಿ ಹೂಡಿಕೆ ಮಾಡಲಾಗಿದೆ’ ಎಂಬ ಆರೋಪಗಳಿಗೆ ಸಂಬಂಧಿಸಿ ಲಖನೌ ಪೊಲೀಸರು ಇತ್ತೀಚೆಗೆ ವಾಧ್ವಾನ್ ಸಹೋದರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ಆಧಾರದ ಮೇಲೆ ಇ.ಡಿ ಈ ಕ್ರಮ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.